ಬೆಂಗಳೂರು: ನಗರದ ಯೋಜನಾಬದ್ಧ ಅಭಿವೃದ್ಧಿಗೆ ಕೆಲಸ ಮಾಡಬೇಕಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಕಂದಾಯ ಇಲಾಖೆ ಅನುಮತಿ ಪಡೆಯದೆ 23 ಕೆರೆಗಳ ಮೇಲೆ ವಸತಿ ಬಡಾವಣೆ ನಿರ್ಮಾಣ ಮಾಡಿದೆ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ವಿಧಾನಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿಯು ವಿಧಾನಸಭೆಯಲ್ಲಿ ವರದಿ ಮಂಡಿಸಿದೆ.
ಅಲ್ಲದೆ, ಬೆಂಗಳೂರು ನಗರದ ಕೆರೆಗಳನ್ನು ಬಸ್ ನಿಲ್ದಾಣ, ಕ್ರೀಡಾ ಮೈದಾನ, ರಾಷ್ಟ್ರೀಯ ಕ್ರೀಡಾಗ್ರಾಮ, ವಸತಿ ಸಂಕೀರ್ಣ ಹೀಗೆ ಹಲವು ಉಪಯೋಗಗಳಿಗೆ ಸರ್ಕಾರವೇ ಬಳಕೆ ಮಾಡಿದೆ. ಬಿಡಿಎ 23 ಕೆರೆಗಳ ಮೇಲೆ ವಸತಿ ಬಡಾವಣೆ ನಿರ್ಮಾಣ ಮಾಡಿದ್ದು, ಇದಕ್ಕೆ ಕಂದಾಯ ಇಲಾಖೆಯ ಅನುಮೋದನೆ ಪಡೆದಿಲ್ಲ. ಹೀಗಾಗಿ, ಕ್ರಮ ಆಗಬೇಕು ಎಂದು ಶಿಫಾರಸು ಮಾಡಿದೆ.
ಬೆಂಗಳೂರು ನಗರ ಪ್ರದೇಶದಲ್ಲಿ ಮಳೆ ನೀರು ನಿರ್ವಹಣೆಯ ಕುರಿತು ಸಿಎಜಿ 2021ನೇ ಸಾಲಿನಲ್ಲಿ ನೀಡಿರುವ ವರದಿ ಮೇಲೆ ಸಮಿತಿಯು 2023ರ ಅಕ್ಟೋಬರ್‌ನಲ್ಲಿ ಸ್ಥಳ ಪರಿಶೀಲನೆ ನಡೆಸಿ ಸದನದಲ್ಲಿ ವರದಿ ಮಂಡಿಸಿದೆ. ಇದಲ್ಲದೆ, ಬೆಂಗಳೂರು ನಗರದಲ್ಲಿ 1,452 ರಷ್ಟಿದ್ದ ಕೆರೆಗಳ ಸಂಖ್ಯೆ 2020ರ ವೇಳೆಗೆ 210ಕ್ಕೆ ಕುಸಿದಿದೆ. ಇವುಗಳಲ್ಲೂ 907 ಎಕರೆ ಒತ್ತುವರಿಯಾಗಿದ್ದರೆ, 865 ಎಕರೆ ಒತ್ತುವರಿ ತೆರವು ಬಾಕಿಯಿದೆ. ಈ ಬಗ್ಗೆಯೂ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.
ಬೆಂಗಳೂರು ನಗರದಲ್ಲಿ 6,278 ಎಕರೆಯ ವ್ಯಾಪ್ತಿಯ ಕೆರೆಗಳಲ್ಲಿ 907 ಎಕರೆ ಒತ್ತುವರಿಗೆ ಗುರಿಯಾಗಿತ್ತು. ಇದರಲ್ಲಿ 865 ಎಕರೆ ಒತ್ತುವರಿ ತೆರವು ಬಾಕಿ ಇದೆ. ಇನ್ನು ಐಐಎಸ್ಸಿ ವರದಿ ಪ್ರಕಾರ, ಮೊದಲು 1990ರ ದಶಕದಲ್ಲಿ ಬೆಂಗಳೂರಿನಲ್ಲಿ 1,452 ಕೆರೆಗಳಿದ್ದವು. ಇದೀಗ 2020ರ ಡಿಸೆಂಬರ್ ವೇಳೆಗೆ 210ಕ್ಕೆ ಇಳಿದಿದೆ. ಇದರಲ್ಲೂ 66 ಕೆರೆಗಳು ಅಭಿವೃದ್ಧಿಪಡಿಸಿಲ್ಲ. ಉಳಿದಂತೆ 60 ಕೆರೆ ಕಾಮಗಾರಿ ಪ್ರಗತಿಯಲ್ಲಿದೆ.
ಇನ್ನು ಕೋರಮಂಗಲ ವ್ಯಾಲಿ 113.24 ಕಿ.ಮೀ.ನಿಂದ 2016-17ರ ವೇಳೆಗೆ 62.84 ಕಿ.ಮೀಗೆ, ವೃಷಭಾವತಿ ವ್ಯಾಲಿ 226.29 ಕಿ.ಮೀ. ಉದ್ದದ ಕಾಲುವೆ 111.72 ಕಿ.ಮೀ.ಗೆ ಇಳಿಕೆಯಾಗಿದೆ. ಕೋರಮಂಗಲ ವ್ಯಾಲಿ ಹಾಗೂ ಬೆಳ್ಳಂದೂರು ಕೆರೆಗೆ ಪ್ರವೇಶಿಸುವ ಮೊದಲು ವಿಲೀನಗೊಳ್ಳುವ ಎರಡು ಕಾಲುವೆ 2008 ಮತ್ತು 2016ರ ನಡುವೆ 338 ಮೀ.ನಿಂದ 136 ಮೀ.ಗೆ ಇಳಿಕೆಯಾಗಿದೆ. ಇದಕ್ಕೆ ನಿರ್ಮಾಣ ಚಟುವಟಿಕೆಗಳೇ ಕಾರಣ ಎಂದು ದೂರಿದೆ.
ಕೇಂದ್ರದ ಅನುದಾನಗಳಿಗೆ ತಕ್ಕಂತೆ ಪೂರಕ ಸಿದ್ಧತೆ ನಡೆಸಿ ಕಾಮಗಾರಿ ಕೈಗೆತ್ತಿಗೊಳ್ಳದ ಕಾರಣ ಬಿಬಿಎಂಪಿಗೆ ಕೇಂದ್ರದಿಂದ 58.52 ಕೋಟಿ ರೂ. ಹಾಗೂ ರಾಜ್ಯ ಸರ್ಕಾರದಿಂದ 25.07 ಕೋಟಿ ರೂ. ಅನುದಾನ ನಷ್ಟ ಉಂಟಾಗಿದೆ. ಇನ್ನು 2005-06ರ ಅವಧಿಯಲ್ಲಿ 15 ಪ್ಯಾಕೇಜ್‌ಗಳಲ್ಲಿ 496.90 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಕಣಿವೆಗಳ ಅಭಿವೃದ್ದಿ ಕಾಮಗಾರಿಯನ್ನು ಕಂಪೆನಿಯೊಂದಕ್ಕೆ ನೀಡಲಾಗಿತ್ತು. ಆದರೆ ಕಾಮಗಾರಿಯನ್ನು ಮಧ್ಯದಲ್ಲಿ ತ್ಯಜಿಸಿದ ಕಂಪೆನಿಯಿಂದ ರಿಸ್ಕ್ ಅಂಡ್ ಕಾಸ್ಟ್ ಮೊತ್ತವಾದ 35.31 ಕೋಟಿ ರೂ. ವಸೂಲಿ ಮಾಡಿಲ್ಲ. ಜತೆಗೆ ಆಡಳಿತಾತ್ಮಕ ಮಂಜೂರಾತಿ ಪಡೆಯದೆ ಕಾಮಗಾರಿ ಕಾರ್ಯಾದೇಶ ನೀಡಿರುವುದು, ಮಳೆ ನೀರಿನ ಚರಂಡಿಯಲ್ಲಿನ ನ್ಯೂನತೆ, ಮಳೆ ನೀರು ಕೊಯ್ಲು ನಿರ್ಲಕ್ಷ್ಯ ಸೇರಿದಂತೆ ಹಲವು ವಿಚಾರ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ಇದನ್ನೂ ಓದಿ :ವಿಪಕ್ಷ ಬಿಜೆಪಿ ಸಭಾತ್ಯಾಗದ ಮಧ್ಯೆ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ವಿಧೇಯಕ ಅಂಗೀಕಾರ - PANCHAYAT RAJ VV AMENDMENT BILL