ಬೆಂಗಳೂರು: ಚುನಾವಣಾ ಬಾಂಡ್ ಹೆಸರಿನಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ದುರ್ಬಳಕೆ ಮಾಡಿ ಸುಲಿಗೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ.
ತಮ್ಮ ವಿರುದ್ಧ ಸಾಮಾಜಿಕ ಹೋರಾಟಗಾರ ಆರ್.ಆದರ್ಶ ಅಯ್ಯರ್ ಎಂಬವರು ನೀಡಿದ್ದ ಖಾಸಗಿ ದೂರಿಗೆ ಸಂಬಂಧಿಸಿದಂತೆ ಬೆಂಗಳೂರಿನ ತಿಲಕನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ದೂರು ರದ್ದುಗೊಳಿಸುವಂತೆ ಕೋರಿ ಬಿ.ವೈ.ವಿಜಯೇಂದ್ರ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ವಿಸ್ತೃತ ಆದೇಶ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಕೇಂದ್ರ ಸಚಿವೆ ನಿರ್ಮಲಾ, ಮಾಜಿ ಸಂಸದ ನಳೀನ್ ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಮತ್ತಿತರು ಚುನಾವಣಾ ಬಾಂಡ್‌ಗಳ ಸೋಗಿನಲ್ಲಿ ಸುಲಿಗೆ ಮಾಡಿದ್ದು, 8 ಸಾವಿರ ಕೋಟಿಗೂ ಅಧಿಕ ಲಾಭ ಪಡೆದಿದ್ದಾರೆ ಎಂದು ಆರೋಪಿಸಿ ಜನಾಧಿಕಾರ ಸಂಘರ್ಷ ಪರಿಷತ್ (ಜೆಎಸ್‌ಪಿ) ಸಹ-ಸಂಸ್ಥಾಪಕ ಆರ್. ಆದರ್ಶ ಅಯ್ಯರ್ ಅವರು ವಿಚಾರಣಾ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.
ದೂರಿನ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯ ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ನಡೆಸುವಂತೆ ತಿಲಕನಗರ ಪೊಲೀಸ್ ಠಾಣೆಗೆ ನಿರ್ದೇಶನ ನೀಡಿತ್ತು. ಅದರಂತೆ ಎಫ್‌ಐಆರ್ ದಾಖಲಾಗಿತ್ತು. ಈ ಹಿಂದೆ ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತಿತರರ ವಿರುದ್ಧ ಪ್ರಕರಣ ರದ್ದಾಗಿತ್ತು. ಇದೀಗ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ದಾಖಲಾಗಿದ್ದ ಎಐಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಇದನ್ನೂ ಓದಿ: ಹೆಚ್ಚುವರಿ ತೆರಿಗೆ ವಿಧಿಸುವ 'ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ತಿದ್ದುಪಡಿ' ವಿಧೇಯಕ ಅಂಗೀಕಾರ