ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು, ಆರೋಪಿಗಳಾದ ಪವನ್ ಮತ್ತು ನಿಖಿಲ್ನನ್ನು ಮಹಜರಿಗೆ ಒಳಪಡಿಸಿದರು. ಬನಶಂಕರಿ 6ನೇ ಹಂತದಲ್ಲಿರುವ ಪವನ್ ಮನೆಗೆ ಇಬ್ಬರನ್ನೂ ಕರೆದೊಯ್ದು ತನಿಖೆ ನಡೆಸಿದರು. ಈ ವೇಳೆ ಮನೆಯಲ್ಲಿದ್ದ 30 ಲಕ್ಷ ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ರೇಣುಕಾಸ್ವಾಮಿಯನ್ನ ಅಪಹರಿಸುವಂತೆ ಚಿತ್ರದುರ್ಗದ ರಾಘವೇಂದ್ರಗೆ ದರ್ಶನ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪವನ್ ಸೂಚಿಸಿದ್ದನಂತೆ. ಅಪಹರಿಸಿದ ಬಳಿಕ ಪಟ್ಟಣಗೆರೆ ಶೆಡ್ನಲ್ಲಿ ದರ್ಶನ್ ಸೇರಿ ಬಂಧಿತ ಆರೋಪಿಗಳೆಲ್ಲರೂ ಮಾರಣಾಂತಿಕ ಹಲ್ಲೆ ಮಾಡಿ ಹತ್ಯೆಗೈದಿದ್ದರಂತೆ. ಕೊಲೆಯಾಗುತ್ತಿದ್ದಂತೆ ರಾಘವೇಂದ್ರ, ನಿಖಿಲ್ ಸೇರಿ ನಾಲ್ವರಿಗೆ ಹತ್ಯೆ ಆರೋಪವನ್ನ ಒಪ್ಪಿಕೊಳ್ಳುವಂತೆ ಹೇಳಿ 30 ಲಕ್ಷ ಡೀಲ್ ಮಾಡಿಕೊಂಡಿತ್ತಂತೆ. ಇದರಂತೆ ಇಬ್ಬರಿಗೆ 5 ಲಕ್ಷ ನೀಡಿ ಬಂಧನ ಬಳಿಕ ಮನೆಯವರಿಗೆ ನೀಡುವುದಾಗಿ ಒಪ್ಪಂದವಾಗಿತ್ತಂತೆ. ಶರಣಾಗತಿಯಾದ ನಾಲ್ವರಿಗೆ ನೀಡಬೇಕಾಗಿದ್ದ 30 ಲಕ್ಷ ಹಣವನ್ನ ಪವನ್ ತನ್ನ ಮನೆಯಲ್ಲಿ ಇರಿಸಿಕೊಂಡಿದ್ದನಂತೆ. ಅಲ್ಲದೆ, ನಿಖಿಲ್ ತನಗೆ ನೀಡಿದ್ದ 5 ಲಕ್ಷ ಹಣವನ್ನ ಪವನ್ ಬಳಿ ನೀಡಿದ್ದ ಎಂದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿತ್ತು. ಇದರಂತೆ ಇಬ್ಬರನ್ನ ಮಹಜರಿಗೆ ಕರೆದೊಯ್ದು 30 ಲಕ್ಷ ಹಣ ಸೀಜ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ನಟ ದರ್ಶನ್ ವಿರುದ್ಧ ರೌಡಿಶೀಟ್?: ಈ ಕ್ರಮಕ್ಕೆ ಪರಿಗಣಿಸಲಾಗುವ ಮಾನದಂಡಗಳಿವು! - Criteria to open a rowdy sheet