ಕರ್ನಾಟಕ

karnataka

ಮಾಧ್ಯಮಗಳಲ್ಲಿ ಆರೋಪಪಟ್ಟಿ ಪ್ರಸಾರ ತಡೆಯುವಂತೆ ಕೋರಿ ಹೈಕೋರ್ಟ್​ಗೆ ದರ್ಶನ್ ಅರ್ಜಿ - Renukaswamy Murder Case

By ETV Bharat Karnataka Team

Published : Sep 10, 2024, 6:47 AM IST

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಪಟ್ಟಿಯಲ್ಲಿನ ಅಂಶಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವಂತೆ ಕೋರಿ ನಟ ದರ್ಶನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು ಇಂದು ಆದೇಶ ಹೊರಬೀಳಲಿದೆ.

ಹೈಕೋರ್ಟ್​ಗೆ ದರ್ಶನ್ ಅರ್ಜಿ
ಹೈಕೋರ್ಟ್​ಗೆ ದರ್ಶನ್ ಅರ್ಜಿ (ETV Bharat)

ಬೆಂಗಳೂರು:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಕುರಿತು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಆರೋಪಪಟ್ಟಿ ಮತ್ತು ಅದಕ್ಕೆ ಸಂಬಂಧಿಸದಂತೆ ಯಾವುದೇ ಅಂಶಗಳನ್ನು ಪ್ರಸಾರ ಮಾಡದಂತೆ ಎಲ್ಲ ರೀತಿಯ ಮಾಧ್ಯಮ ಸಂಸ್ಥೆಗಳನ್ನು ನಿರ್ಬಂಧಿಸುವಂತೆ ಕೋರಿರುವ ಅರ್ಜಿ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್ ತೂಗುದೀಪ ಶ್ರೀನಿವಾಸ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯ ಪೀಠ, ಮಂಗಳವಾರ ಆದೇಶ ಹೊರಡಿಸುವುದಾಗಿ ತಿಳಿಸಿದೆ.

ವಿಚಾರಣೆ ವೇಳೆ ದರ್ಶನ್ ಪರ ವಕೀಲರು, ಸುದ್ದಿ ಮಾಧ್ಯಮಗಳು, ಅದರಲ್ಲೂ ವಿದ್ಯುನ್ಮಾನ ಮಾಧ್ಯಮಗಳು ದಿನಪೂರ್ತಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸುದ್ದಿಯನ್ನು ಪೂರ್ವಾಗ್ರಹಪೀಡಿತ ಭಾವನೆಯಿಂದ ಪ್ರಸಾರ ಮಾಡುತ್ತಿವೆ. ಪ್ರಸಾರ ಅಥವಾ ಮುದ್ರಣ ಮಾಧ್ಯಮಗಳಲ್ಲಿನ ವರದಿ ಪ್ರಕಟ ಮಾಡುವುದು ಕೇಬಲ್ ಟೆಲಿವಿಷನ್ ನೆಟ್‌ವರ್ಕ್ಸ್ ನಿಯಂತ್ರಣ ಕಾಯಿದೆ ಮತ್ತು ದರ್ಶನ್ ಅವರ ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ, ಮಾಧ್ಯಮಗಳನ್ನು ಈ ವಿಷಯದಲ್ಲಿ ನಿಯಂತ್ರಿಸಲು ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಆಕ್ಷೇಪಿಸಿದ ಕೇಂದ್ರ ಸರ್ಕಾರದ ಪರ ವಕೀಲರು, ಭಾರತದಲ್ಲಿ ಕನಿಷ್ಠ 2 ಸಾವಿರ ಮಾಧ್ಯಮಗಳಿವೆ. ಇವುಗಳಲ್ಲಿ ನಾವು ಯಾರನ್ನು ನಿಯಂತ್ರಿಸಬೇಕು?. ಅಷ್ಟಕ್ಕೂ, ಇದು ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದು. ಅರ್ಜಿದಾರರು ಹೀಗೆ ಆದೇಶ ಪಡೆಯಲು ಆಗದು. ಒಂದು ವೇಳೆ ಅವರು ನಿರ್ದಿಷ್ಟ ಮಾಧ್ಯಮ ಅಥವಾ ಚಾನೆಲ್ ವಿರುದ್ಧ ನಮಗೆ ದೂರು ನೀಡಿದರೆ ಸಚಿವಾಲಯ ಖಂಡಿತ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಪೀಠಕ್ಕೆ ಸ್ಪಷ್ಟಪಡಿಸಿದರು.

ಇದನ್ನೂ ಓದಿ:ದೊಡ್ಡಬಳ್ಳಾಪುರ - ನೆಲಮಂಗಲ ರಸ್ತೆ ಗುಂಡಿಗಳಿಗೆ ಸಿಕ್ತು ಮುಕ್ತಿ: ನಟ ವಿನೋದ್ ರಾಜ್ ಸಮಾಜಸೇವೆಗೆ ಪ್ರಶಂಸೆ - Vinod Raj social work

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸ್ವಯಂಪ್ರೇರಿತವಾಗಿ ನೀವೇಕೆ ಕ್ರಮ ಕೈಗೊಳ್ಳಬಾರದು ಎಂದು ಕೇಂದ್ರದ ಪರ ವಕೀಲರನ್ನು ಪ್ರಶ್ನಿಸಿತು. ಇದಕ್ಕೆ ವಕೀಲರು, ಆ ರೀತಿ ಅನಿರ್ದಿಷ್ಟ ವಿಧಾನದಲ್ಲಿ ಕ್ರಮ ಕೈಗೊಳ್ಳಲಾಗದು. ಬೇಕಿದ್ದರೆ, ಅರ್ಜಿದಾರರು ನಿರ್ದಿಷ್ಟ ಮಾಧ್ಯಮ ಸಂಸ್ಥೆಗಳನ್ನು ಹೆಸರಿಸಿ ಅವುಗಳ ವಿರುದ್ಧ ದೂರು ನೀಡಿದರೆ ಅಂಥವರ ವಿರುದ್ಧ ಸಚಿವಾಲಯ ತಕ್ಕ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದರು.

ಈ ವೇಳೆ ಪೀಠ, ಅರ್ಜಿದಾರರಿಗೆ ಆಕ್ಷೇಪಣೆ ಇರುವ ನಿರ್ದಿಷ್ಟ ಮಾಧ್ಯಮಗಳ ಕುರಿತು ಮಂಗಳವಾರ ಮೆಮೊ ಸಲ್ಲಿಸಿ ಎಂದು ಸೂಚನೆ ನೀಡಿ ವಿಚಾರಣೆ ಮುಂದೂಡಿತು.

ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪೊಲೀಸರು ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಸಿದ್ದಾರೆ. ದರ್ಶನ್ ಸೇರಿ ಪ್ರಕರಣದ ಎಲ್ಲ ಆರೋಪಿಗಳಿಗೆ ಸೆ.12ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್ ಸೋಮವಾರ ಆದೇಶಿಸಿದೆ.

ಇದನ್ನೂ ಓದಿ:ವಿಚ್ಛೇದನ ಘೋಷಿಸಿದ ತಮಿಳಿನ ಜನಪ್ರಿಯ ನಟ ಜಯಂ ರವಿ: ಆರತಿ ಜೊತೆಗಿನ 15 ವರ್ಷಗಳ ದಾಂಪತ್ಯಕ್ಕೆ ವಿರಾಮ - Jayam Ravi Aarti Divorce

ABOUT THE AUTHOR

...view details