ಬೆಳಗಾವಿ:ವಕ್ಫ್ ಆಸ್ತಿ ಗೊಂದಲ ನಿವಾರಣೆಗೆ ನಿವೃತ್ತ ಹೈಕೋರ್ಟ್ ಜಡ್ಜ್ ನೇತೃತ್ವದಲ್ಲಿ ಸಮಿತಿ ರಚಿಸುವ ಕುರಿತು ಸಿಎಂ ಸಿದ್ದರಾಮಯ್ಯ ಇಂಗಿತ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿಂದು ವಕ್ಫ್ ವಿಚಾರವಾಗಿ ಮಾತನಾಡಿದ ಅವರು, ಕೇಂದ್ರದ ವಕ್ಫ್ ಕಾಯ್ದೆ 1954ರ ಕಾನೂನು ಬದಲಾವಣೆ ಮಾಡಿ ಅಂತಿದ್ದಾರೆ. ಅದು ಕೇಂದ್ರದ ಕಾಯ್ದೆ, ನಾವು ಬದಲಾವಣೆ ಮಾಡಲು ಆಗೋದಿಲ್ಲ. ಇವರದ್ದೇ ಸರ್ಕಾರ ಇದೆಯಲ್ಲ, ರದ್ದು ಮಾಡಲಿ. ಬಿಜೆಪಿಯವ್ರೇ ತಮ್ಮ ಪ್ರಣಾಳಿಕೆಯಲ್ಲಿ ವಕ್ಫ್ ಆಸ್ತಿ ತೆರವು ಮಾಡಿಸ್ತೇವೆ ಅಂತ ಹೇಳಿದ್ದಾರೆ. ರೈತರಿಗೆ ಇನಾಂ ಭೂಮಿ, ಭೂ ಸುಧಾರಣೆ ಕಾಯ್ದೆಯಡಿ ಮಂಜೂರಾದ ಭೂಮಿ ಮುಟ್ಟಲ್ಲ ಎಂದು ಸ್ಪಷ್ಟಪಡಿಸಿದರು.
ಖಬರಸ್ತಾನ್, ದರ್ಗಾ, ಮಸೀದಿ ಆಸ್ತಿಗಳ ರಕ್ಷಣೆ ಸರ್ಕಾರದ ಕರ್ತವ್ಯ. ಉಳಿದ 20 ಸಾವಿರ ಎಕರೆ ಭೂಮಿ ವಕ್ಫ್ಗೆ ಸೇರಿದೆ, ಇದರ ರಕ್ಷಣೆ ಮಾಡಬೇಕು. ವಕ್ಫ್ ಭೂಮಿ ರಕ್ಷಣೆ ಬಗ್ಗೆ ಸುಪ್ರೀಂ ಕೋರ್ಟ್ ಆದೇಶವೇ ಇದೆ. ಇದೆಲ್ಲ ಆದರೂ ಕೂಡಾ ಒಂದು ಸಮಿತಿ ಮಾಡಬೇಕು ಅಂದ್ರೆ ಸಮಿತಿ ಮಾಡೋಣ. ನಿವೃತ್ತ ಹೈಕೋರ್ಟ್ ಜಡ್ಜ್ ನೇತೃತ್ವದಲ್ಲಿ ಒಂದು ಸಮಿತಿ ಮಾಡಲು ಸಿದ್ಧರಿದ್ದೇವೆ. ಶಾಲೆ, ದೇವಸ್ಥಾನಗಳ ಭೂಮಿ, ಇನಾಂ, ಭೂ ಸುಧಾರಣೆ ಕಾಯದೆಯಡಿ ಭೂಮಿ ಬಿಟ್ಟು ಹೋಗಿದ್ರೆ ಅಂತಹ ಜಮೀನುಗಳ ಪರಿಶೀಲನೆಗೆ ಸಮಿತಿ ಮಾಡೋಣ. ಅಂಥ ಸಮಿತಿ ಮಾಡಲು ಸರ್ಕಾರ ತಯಾರಾಗಿದೆ ಎಂದು ತಿಳಿಸಿದರು.
ರೈತರಿಗೆ ನೀಡಿದ ನೋಟಿಸ್ ವಾಪಸ್ ಕೊಡಬೇಕು ಅಂತ ಹೇಳಿದ್ದೇನೆ. ಕೆಲವು ಕಡೆ ಇನ್ನೂ ರೈತರ ನೋಟಿಸ್ ವಾಪಸ್ ಪಡೆಯದಿದ್ರೆ ಪಡೆಯಲು ಇನ್ನೊಮ್ಮೆ ಹೇಳ್ತೀನಿ, ವಾಪಸ್ ಪಡೆಯುತ್ತೇವೆ. ದೇವಸ್ಥಾನಗಳಿಗೆ ನೋಟಿಸ್ ಕೊಟ್ಟಿದ್ರೆ ಅದನ್ನೂ ತೆಗೆದುಕೊಳ್ಳೋಕೆ ಹೇಳಿದ್ದೇವೆ. ಒಂದು ವೇಳೆ ದೇವಸ್ಥಾನ ವಕ್ಫ್ ಆಸ್ತಿಯಲ್ಲಿದ್ರೂ ಆ ಆಸ್ತಿ ವಾಪಸ್ ಪಡೆಯಲ್ಲ. ಕಿತ್ಕೊಳ್ಳೋಕೆ ಹೋಗಲ್ಲ. ಜಮೀರ್ ಎರಡು ಮೂರು ವಿಚಾರ ಸ್ಪಷ್ಟಪಡಿಸಿದ್ದಾರೆ. ರೈತರಿಗೆ ನೋಟಿಸ್ ಕೊಟ್ಟಿದ್ರೆ ವಾಪಸ್ ಪಡೀತೀವಿ ಅಂದಿದ್ದಾರೆ. ಮೈಸೂರಿನ ಮುನೇಶ್ವರ ನಗರ, ಚಿಕ್ಕಬಳ್ಳಾಪುರ, ಶ್ರೀರಂಗಪಟ್ಟಣದಲ್ಲಿ ನೋಟಿಸ್ ಕೊಟ್ಟಿದ್ದನ್ನು ಬಿಜೆಪಿ ಗಮನಕ್ಕೆ ತಂದಿದ್ದಾರೆ ಎಂದರು.
ಎಲ್ಲರ ಕಾಲದಲ್ಲೂ ನೋಟಿಸ್ ಕೊಟ್ಟಿದ್ದಾರೆ. ಬಿಜೆಪಿ ಪ್ರಣಾಳಿಕೆಯಲ್ಲೇ ವಕ್ಫ್ ಆಸ್ತಿ ತೆರವು ಬಗ್ಗೆ ಉಲ್ಲೇಖ ಇದೆ. ನೋಟಿಸ್ನಿಂದ ರೈತರಿಗೆ ಸಮಸ್ಯೆ ಆದ್ರೆ ವಿತ್ ಡ್ರಾ ಮಾಡ್ತೇವೆ. 1.10 ಲಕ್ಷ ಎಕರೆ ವಕ್ಫ್ ಆಸ್ತಿ ಇದೆ, ಉಳಿದಿರೋದು 20 ಸಾವಿರ ಎಕರೆ ಮಾತ್ರ. ಇದನ್ನು ರಕ್ಷಣೆ ಮಾಡಬೇಕಲ್ಲ? ಅಚಾತುರ್ಯದಿಂದ ರೈತರಿಗೆ ನೋಟಿಸ್ ಹೋಗಿದ್ರೆ ವಾಪಸ್ ಪಡೀತೀವಿ. ಇಂಡೀಕರಣ ನಿಮ್ಮ ಕಾಲದಲ್ಲೂ ಆಗಿದೆ, ನಮ್ಮ ಕಾಲದಲ್ಲೂ ಆಗಿದೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಶೇ.95ರಷ್ಟು ವಕ್ಫ್ ಆಸ್ತಿ ಮುಸ್ಲಿಮರಿಂದಲೇ ಒತ್ತುವರಿ; ದೇವಸ್ಥಾನ, ರೈತರ ಆಸ್ತಿ ಮುಟ್ಟಲ್ಲ - ಸಚಿವ ಜಮೀರ್