ಬೆಂಗಳೂರು :ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಬಂಧಿಸಿದೆ. ಪ್ರಮುಖ ಆರೋಪಿಗಳಾದ ಪ್ರಕರಣದ ಮಾಸ್ಟರ್ ಮೈಂಡ್ ಅಬ್ದುಲ್ ಮತೀನ್ ತಾಹಾ ಹಾಗೂ ಐಇಡಿ ಸ್ಫೋಟಕ ಇರಿಸಿದ್ದ ಬಾಂಬರ್ ಮುಸ್ಸಾವಿರ್ ಹುಸೇನ್ ಶಾಜಿಬ್ ನನ್ನು ಕೋಲ್ಕತ್ತಾದಲ್ಲಿ ಬಂಧಿಸಲಾಗಿದೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.
ನಕಲಿ ಐಡೆಂಟಿಟಿಗಳೊಂದಿಗೆ ಉಳಿದುಕೊಂಡಿದ್ದ ಆರೋಪಿಗಳ ಅಡಗುತಾಣದ ಕುರಿತು ಖಚಿತ ಮಾಹಿತಿ ಪಡೆದಿದ್ದ ಎನ್ಐಎ ಅಧಿಕಾರಿಗಳು ಕೇಂದ್ರೀಯ ತನಿಖಾ ಏಜೆನ್ಸಿಗಳು, ಪಶ್ಚಿಮ ಬಂಗಾಳ, ತೆಲಂಗಾಣ, ಕರ್ನಾಟಕ ಹಾಗೂ ಕೇರಳ ಪೊಲೀಸ್ ತಂಡಗಳ ಸಹಕಾರದೊಂದಿಗೆ ಇಂದು ಮುಂಜಾನೆಯೇ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿರುವ ಬಗ್ಗೆ ಎನ್ಐಎ ತಂಡ ಮಾಧ್ಯಮಗಳಿಗೆ ಮಾಹಿತಿ ನೀಡಿದೆ.
ಆರೋಪಿಗಳಿಗಾಗಿ 43 ದಿನಗಳ ಕಾಲ ಹುಡುಕಾಟ :ಮಾರ್ಚ್ 1 ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ ಐದಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ತನಿಖೆಯ ಹೊಣೆಯನ್ನು ಎನ್ಐಎಗೆ ವಹಿಸಲಾಗಿತ್ತು. ತನಿಖೆ ಆರಂಭಿಸಿದ್ದ ಎನ್ಐಎ, ಪ್ರಮುಖ ಆರೋಪಿಗಳಿಗೆ ಲಾಜಿಸ್ಟಿಕ್ ಬೆಂಬಲ ನೀಡಿದ ಆರೋಪದಡಿ ಚಿಕ್ಕಮಗಳೂರಿನ ಕಳಸ ಮೂಲದ ಮುಜಾಮಿಲ್ ಶರೀಫ್ ಎಂಬಾತನನ್ನು ಮಾರ್ಚ್ 26ರಂದು ಬಂಧಿಸಿತ್ತು. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಹಚ್ಚುವ ಮತ್ತು ಬಂಧಿಸುವ ಪ್ರಯತ್ನಗಳ ಭಾಗವಾಗಿ ಮಾರ್ಚ್ 29 ರಂದು ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶದ 18 ಸ್ಥಳಗಳಲ್ಲಿ ಎನ್ಐಎ ತಂಡಗಳು ಶೋಧ ನಡೆಸಿದ್ದವು. ಇದಲ್ಲದೇ ಆರೋಪಿಗಳ ಬಂಧನಕ್ಕೆ ಸಹಾಯಕಾರಿಯಾಗಬಲ್ಲ ಮಾಹಿತಿ ನೀಡಿದವರಿಗೆ ತಲಾ ಹತ್ತು ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಇದೀಗ 43 ದಿನಗಳ ಬಳಿಕ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಎನ್ಐಎ ಯಶಸ್ವಿಯಾಗಿದೆ.
ಇದನ್ನೂ ಓದಿ :ಕೆಫೆ ಬಾಂಬ್ ಸ್ಫೋಟ ಪ್ರಕರಣ: ಈಗಾಗಲೇ ಶಂಕಿತರನ್ನು ಎನ್ಐಎ ಪತ್ತೆ ಹಚ್ಚಿದೆ - ಗೃಹ ಸಚಿವ ಪರಮೇಶ್ವರ್ - G Parameshwara