ಬೆಂಗಳೂರು: ದೇಶಾದ್ಯಂತ ಸುದ್ದಿಯಾಗಿರುವ ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಎನ್ಐಎ, ಕೇಂದ್ರ ಗುಪ್ತಚರ ಸೇರಿದಂತೆ ರಾಜ್ಯ ಪೊಲೀಸ್ ಇಲಾಖೆಯು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿವೆ.
ಆರೋಪಿಯು ಬಿಎಂಟಿಸಿ ಬಸ್ನಲ್ಲಿ ಬಂದು ಕೆಫೆಯಲ್ಲಿ ರವೆ ಇಡ್ಲಿ ತಿಂದು ಟೈಮರ್ ಬಾಂಬ್ ಇಟ್ಟು ಸ್ಫೋಟಕ್ಕೆ ಕಾರಣನಾಗಿದ್ದ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಸಿಸಿಟಿವಿ ಮೊರೆಹೋಗಿದ್ದಾರೆ. ಕ್ಯಾಪ್ ಧರಿಸಿ ಕನ್ನಡಕ ಹಾಕಿಕೊಂಡು ಮುಖ ಚಹರೆ ತಿಳಿಯದಂತೆ ಬಾಂಬ್ ಇಟ್ಟುಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅನುಮಾನಿತರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆಸಲಾಗಿದೆ.
ಸಿಸಿಬಿಗೆ ಪ್ರಕರಣ ಹಸ್ತಾಂತರ:ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿ (ಯುಎಪಿಎ) ಪ್ರಕರಣ ದಾಖಲಿಸಿಕೊಂಡಿದ್ದ ಎಚ್ಎಎಲ್ ಪೊಲೀಸರು ಇದೀಗ ನಗರ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರಿಸಿದ್ದಾರೆ. ಈಗಾಗಲೇ ನಾಲ್ವರನ್ನು ವಶಕ್ಕೆ ಪಡೆದುಕೊಂಡು ಅಜ್ಞಾತಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಎರಡು ಆಯಾಮಗಳಿಂದ ತನಿಖೆ:ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಆಯಾಮಗಳಿಂದ ತನಿಖೆ ನಡೆಯುತ್ತಿದೆ. ಯಾವ ಕಾರಣಕ್ಕಾಗಿ ಬಾಂಬ್ ಸ್ಫೋಟ ಮಾಡಲಾಗಿದೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ. ನಿಷೇಧಿತ ಭಯೋತ್ಪಾದನಾ ಸಂಘಟನೆಗಳ ಜೊತೆ ಸೇರಿ ಉದ್ದೇಶಪೂರ್ವಕವಾಗಿ ಉಪಹಾರ ಗೃಹದಲ್ಲಿ ಬಾಂಬ್ ಇಟ್ಟು ಸ್ಫೋಟಿಸಲಾಗಿದೆಯಾ ಎಂಬ ಪ್ರಶ್ನೆಯೂ ಮೂಡಿದೆ. ಎಫ್ಎಸ್ಎಲ್ ಅಧಿಕಾರಿಗಳು ಸ್ಥಳದಲ್ಲಿ ಸ್ಫೋಟಕ್ಕೆ ಬಳಸಿರುವ ವಸ್ತುಗಳ ಪರಿಶೀಲನೆ ನಡೆಸಿ, ನಂತರ ಅವುಗಳನ್ನು ವಶಪಡಿಸಿಕೊಂಡಿದ್ದಾರೆ.