ಕರ್ನಾಟಕ

karnataka

ETV Bharat / state

ಬಿಜೆಪಿಗೆ ಲಕ್ಷ್ಮಣ ಸವದಿ ಕರೆತರಲು ಕಸರತ್ತು: ಕತ್ತಿ, ಜೊಲ್ಲೆ ಹೇಳಿದ್ದೇನು? - ಬೆಳಗಾವಿ

ಜಗದೀಶ್ ಶೆಟ್ಟರ್ ಬಿಜೆಪಿಗೆ ಮರು ಸೇರ್ಪಡೆಯಾದ ಬಳಿಕ ಲಕ್ಷ್ಮಣ ಸವದಿ ಅವರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳುವ ಕೆಲಸ ತೆರೆಮರೆಯಲ್ಲಿ ಜೋರಾಗಿ ನಡೆಯುತ್ತಿದೆ.

ಬಿಜೆಪಿಗೆ ಲಕ್ಷ್ಮಣ ಸವದಿ ಕರೆತರಲು ಕಸರತ್ತು
ಬಿಜೆಪಿಗೆ ಲಕ್ಷ್ಮಣ ಸವದಿ ಕರೆತರಲು ಕಸರತ್ತು

By ETV Bharat Karnataka Team

Published : Jan 30, 2024, 10:47 AM IST

Updated : Jan 30, 2024, 11:06 AM IST

ಬಿಜೆಪಿಗೆ ಲಕ್ಷ್ಮಣ ಸವದಿ ಕರೆತರಲು ಕಸರತ್ತು

ಬೆಳಗಾವಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಳಿಕ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಕರೆತರಲು ಬಿಜೆಪಿಯಲ್ಲಿ ಕಸರತ್ತು ತೀವ್ರಗೊಂಡಿದೆ. ಸವದಿ ಅವರನ್ನು ಬಿಜೆಪಿಗೆ ಕರೆತರುವ ಪ್ರಯತ್ನದ ಸುಳಿವನ್ನು ಹಾಲಿ, ಮಾಜಿ ಸಂಸದರು ಬಿಟ್ಟುಕೊಟ್ಟಿದ್ದಾರೆ.

ಕಿತ್ತೂರು ಕರ್ನಾಟಕ ಭಾಗದ ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ ಹಾಗೂ ಕೊಪ್ಪಳದಲ್ಲಿ ತಮ್ಮದೇ ರೀತಿಯ ಪ್ರಭಾವ ಹೊಂದಿರುವ ಲಕ್ಷ್ಮಣ ಸವದಿ ಬಿಜೆಪಿಗೆ ಮರು ಸೇರ್ಪಡೆಯಾದರೆ ಲೋಕಸಭೆ ಚುನಾವಣೆಯಲ್ಲಿ ಅನುಕೂಲ ಆಗಲಿದೆ ಎಂಬ ಲೆಕ್ಕಾಚಾರವನ್ನು ಬಿಜೆಪಿ ಹೊಂದಿದೆ. ಈ ವಿಷಯವನ್ನೇ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಂಸದ ರಮೇಶ್ ಕತ್ತಿ ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ಕುರಿತು ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಮಾಜಿ ಸಂಸದ ರಮೇಶ್ ಕತ್ತಿ, "ಜಗದೀಶ್ ಶೆಟ್ಟರ್ ಎಂಟು ತಿಂಗಳಿಂದ ದೈಹಿಕವಾಗಿ ಮಾತ್ರ ಅಲ್ಲಿದ್ದರು. ಆದರೆ ಅವರ ಮನಸ್ಸು ಬಿಜೆಪಿಯಲ್ಲಿತ್ತು. ಅವರು ಬಂದಿದ್ದು ಒಳ್ಳೆಯದಾಯಿತು. ಹೀಗಾಗಿ ರಾಷ್ಟ್ರೀಯ ಮತ್ತು ರಾಜ್ಯಾಧ್ಯಕ್ಷರಿಗೆ ಅಭಿನಂದನೆ ಹೇಳುತ್ತೇನೆ. ಲಕ್ಷ್ಮಣ ಸವದಿಯವರು ಬಿಜೆಪಿಗೆ ಬರುವ ಕುರಿತು ಈಗಾಗಲೇ ಚರ್ಚೆ ಶುರುವಾಗಿದೆ. ರಾಷ್ಟ್ರೀಯ, ರಾಜ್ಯ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ನಮ್ಮನ್ನೂ ಕೂಡ ವರಿಷ್ಠರು ಕರೆದು ಮಾತನಾಡಿಸಿ ಅಭಿಪ್ರಾಯ ಕೇಳಿದ್ದಾರೆ. ಅವರು ಪಕ್ಷಕ್ಕೆ ಬಂದ್ರೆ ಹೆಚ್ಚಿನ ಶಕ್ತಿ ಬರುತ್ತೆ ಎಂದು ಹೇಳಿದ್ದೇವೆ" ಎಂದರು.

ಸವದಿ ಅವರಿಗೆ ಸ್ಥಾನಮಾನ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, "ಸ್ಥಾನಮಾನಕ್ಕಾಗಿ ಯಾರೂ ಬರುವುದಿಲ್ಲ. ಕಾಂಗ್ರೆಸ್‌ಗೆ ಹೋದಾಗ ಏನು ಸ್ಥಾನಮಾನ ಕೇಳಿ ಹೋಗಿದ್ದರು? ಅವರೇನು ಕೊಟ್ರು?. ನಮ್ಮ ಪಕ್ಷಕ್ಕೆ ಬಂದರೆ ಏನು ಕೊಡಬೇಕೆಂದು ನಮ್ಮನ್ನು ಕರೆದು ನಿರ್ಣಯ ಮಾಡುತ್ತಾರೆ. ರಾಜ್ಯ ಮತ್ತು ರಾಷ್ಟ್ರೀಯ ವರಿಷ್ಠರು ಹೇಳಿದಂತೆ ಗೌರವಯುತವಾಗಿ ಅವರನ್ನು ಬರಮಾಡಿಕೊಳ್ಳುತ್ತೇವೆ" ಎಂದು ಅವರು ತಿಳಿಸಿದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, "ಲಕ್ಷ್ಮಣ ಸವದಿಯನ್ನು ಕರೆತರುವ ಜವಾಬ್ದಾರಿ ಎಲ್ಲರ ಹೆಗಲಿಗಿದೆ. ನಾನು, ಈರಣ್ಣ ಕಡಾಡಿ, ಮಹಾಂತೇಶ್ ದೊಡ್ಡಗೌಡರ, ರಮೇಶ್ ಕತ್ತಿ ಸೇರಿ ಜಿಲ್ಲೆಯ ಎಲ್ಲ ನಾಯಕರ ಮೇಲಿದೆ. ಸವದಿ ಒಪ್ಪಿಗೆ ಕೊಡಬೇಕು. ಕೇಂದ್ರದ ಮುಖಂಡರ ಜತೆ ಚರ್ಚೆ ಆಗಬೇಕು. ಸವದಿಯವರು ಬರಲಿ ಅನ್ನೋದು ನಮ್ಮ ಆಶಯ. ಬಂದರೆ ಪಕ್ಷ, ಬೆಳಗಾವಿ ಜಿಲ್ಲೆಗೆ ಒಳ್ಳೆಯದಾಗುತ್ತದೆ. ನಮ್ಮ ಪಕ್ಷದಿಂದ ಹೊರ ಹೋದವರಿಗೆ ನಾವು ಆಹ್ವಾನ ಕೊಟ್ಟಿದ್ದೇವೆ. ಸವದಿಯರಿಗೂ ಅಹ್ವಾನ ಕೊಟ್ಟಿದ್ದೇವೆ. ನಮ್ಮ ರಾಜ್ಯಾಧ್ಯಕ್ಷರು, ಎಲ್ಲರೂ ಕೂಡ ಪ್ರಯತ್ನ ಮಾಡುತ್ತಿದ್ದಾರೆ" ಎಂದು ಹೇಳಿದರು.

ಇದನ್ನೂ ಓದಿ:ನಮ್ಮ‌ ಮನೆಗೆ ಮರಳಿ ಬಂದಿರುವುದು ಖುಷಿಯಾಗಿದೆ: ಜಗದೀಶ್ ಶೆಟ್ಟರ್

Last Updated : Jan 30, 2024, 11:06 AM IST

ABOUT THE AUTHOR

...view details