ಮಂಗಳೂರು: ಮೂರು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿದ್ದ ಮಳೆ ನಿನ್ನೆ ರಾತ್ರಿಯಿಂದ ಕೊಂಚ ತಗ್ಗಿದೆ. ನೆರೆಯ ಭೀತಿಯಲ್ಲಿದ್ದ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಇಳಿಮುಖವಾಗಿದೆ.
ಕಳೆದ ಒಂದು ವಾರದಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿತ್ತು. ಎಲ್ಲೆಡೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದವು. ನೀರು ನುಗ್ಗಿರುವ ಪ್ರದೇಶಗಳ ಮನೆ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು. ವ್ಯಾಪಕ ಮಳೆಯಿಂದ ಮಂಗಳೂರು ಮತ್ತು ಬೆಂಗಳೂರನ್ನು ಸಂಪರ್ಕಿಸುವ ಮುಖ್ಯ ಎರಡೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರಕ್ಕೆ ತೊಂದರೆ ಉಂಟಾದ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ನಲ್ಲಿ ಸಂಚಾರ ನಿಷೇಧಿಸಲಾಗಿದ್ದು, ಸಂಪಾಜೆ ಘಾಟಿಯಲ್ಲಿ ರಾತ್ರಿ 8ರ ಬಳಿಕ ವಾಹನ ಸಂಚಾರಕ್ಕೆ ನಿಷೇಧಿಸಲಾಗಿತ್ತು. ಕೆತ್ತಿಕಲ್ ಪ್ರದೇಶದಲ್ಲಿ ಗುಡ್ಡ ಕುಸಿತದ ಭೀತಿಯೂ ಎದುರಾಗಿದೆ.
ಈ ನಡುವೆ ನಿನ್ನೆ ರಾತ್ರಿಯಿಂದ ಮಳೆ ಕೊಂಚ ಬಿಡುವು ಪಡೆದಿದ್ದು, ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಇಳಿಮುಖವಾಗಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ಬಿಡುವು ಪಡೆದಿರುವ ಹಿನ್ನೆಲೆಯಲ್ಲಿ ಅಸ್ತವ್ಯಸ್ತವಾಗಿರುವ ಜನಜೀವನವೂ ಸಮತೋಲನಕ್ಕೆ ಬರುವಂತಿದೆ. ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂದೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.