ಬೆಂಗಳೂರು: ಬಂಗಾಳ ಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಎದ್ದಿರುವ ಚಂಡಮಾರುತಗಳು ವಾಯುಭಾರ ಕುಸಿತ ಉಂಟು ಮಾಡಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಇಂದು 12 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಿಗೆ ಮುಂದಿನ 24 ಗಂಟೆಗಳಿಗೆ ಅನ್ವಯವಾಗುವಂತೆ ಆರೆಂಜ್ ಅಲರ್ಟ್ ಕೊಡಲಾಗದೆ. ಉತ್ತರ ಕನ್ನಡ, ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಕೊಡಗು, ಮೈಸೂರು, ವಿಜಯನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ನಿನ್ನೆಯಿಂದ ಸರಾಸರಿ 66.1 ಎಂ.ಎಂ ಮಳೆಯಾಗಿದೆ. ಹೆಚ್ಎಎಲ್ ವ್ಯಾಪ್ತಿಯಲ್ಲಿ ಅತಿ ಹೆಚ್ಚು 89.3 ಮಿ.ಮೀ. ಮಳೆ ದಾಖಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ 63.1 ಮಿ.ಮೀ., ಇಲೆಕ್ಟ್ರಾನಿಕ್ ಸಿಟಿ ಮತ್ತು ಅದರ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ 43.5 ಮಿ.ಮೀ. ವರ್ಷಧಾರೆ ಸುರಿದಿದೆ. ಉಳಿದಂತೆ, ಕಲಬುರಗಿ ಜಿಲ್ಲೆಯಲ್ಲಿ 45.5 ಮಿ.ಮೀ. ಮಳೆ ಬಿದ್ದಿದೆ. ಸರಾಸರಿ ಉಷ್ಣಾಂಶವು ಸರಾಸರಿ ಗರಿಷ್ಠ 22 ಡಿಗ್ರಿ ಮತ್ತು ಕನಿಷ್ಠ 19 ಡಿಗ್ರಿ ದಾಖಲಾಗಿದೆ.
ಬೆಂಗಳೂರಲ್ಲಿ ಮಳೆ (ETV Bharat) ಸಿಲಿಕಾನ್ ಸಿಟಿಯಲ್ಲಿ ಇಂದೂ ಮಳೆ:ಬೆಂಗಳೂರಲ್ಲಿ ಬುಧವಾರ ಮುಂಜಾನೆಯಿಂದಲೇ ಮಳೆ ಸುರಿಯುತ್ತಿದೆ. ನಿನ್ನೆಯಿಂದ ಮಳೆರಾಯನ ನಿರಂತರ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಅಲ್ಲದೇ, ಕಚೇರಿ ಹಾಗೂ ಇತರ ಕೆಲಸಗಳಿಗೆ ಹೋಗುವವರು ಪರದಾಡುತ್ತಿದ್ದಾರೆ. ತಗ್ಗುಪ್ರದೇಶಗಳಿಗೆ ನೀರು ಹರಿದ ಪರಿಣಾಮ ರಸ್ತೆಗಳು, ಕೆಲ ಬಡಾವಣೆಗಳು, ಗುಡಿಸಲುಗಳು, ಜಲಾವೃತವಾಗಿವೆ.
ನಗರದ ಕೆಲ ಅಪಾರ್ಟ್ಮೆಂಟ್ ಆವರಣಗಳು ಸಂಪೂರ್ಣ ಜಲಾವೃತಗೊಂಡಿದ್ದು, ತೊಂದರೆ ಉಂಟಾಗಿದೆ. ಇಲ್ಲಿನ ರಾಜಾಜಿನಗರ, ವಿಜಯನಗರ, ಮೆಜೆಸ್ಟಿಕ್ ಸೇರಿದಂತೆ ಹಲವಡೆ ಜೋರಾಗಿ ಮಳೆ ಬೀಳುತ್ತಿದೆ. ಪರಪ್ಪನ ಅಗ್ರಹಾರ ಸುತ್ತಮುತ್ತ ಮಳೆಯಿಂದ ಮುಖ್ಯ ರಸ್ತೆಯಲ್ಲಿ ನೀರು ತುಂಬಿ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿದೆ.
ಮಳೆ ಮುನ್ಸೂಚನೆ (Meteorological Department) ''ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಏಕಕಾಲದಲ್ಲಿ ತೀವ್ರ ವಾಯುಭಾರ ಕುಸಿತವಾಗಿದೆ. ಅಲ್ಲದೆ, ಮೇಲ್ಮೆ ಸುಳಿಗಾಳಿ ಉಂಟಾಗಿರುವುದು ಹಾಗೂ ತೇವಾಂಶ ಭರಿತ ಮೋಡಗಳ ಇರುವುದರಿಂದ ರಾಜ್ಯದ ಇತರ ಭಾಗಗಳಿಗಿಂತ ದಕ್ಷಿಣ ಕರ್ನಾಟಕ ವ್ಯಾಪ್ತಿಯ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 3 ದಿನಗಳವರೆಗೆ ಮಳೆ ತೀವ್ರತೆ ಹೆಚ್ಚಿರಲಿದೆ. ಒಳನಾಡಿನಲ್ಲಿ ಸದ್ಯಕ್ಕೆ ಯಾವುದೇ ಚಂಡಮಾರುತ ಸೃಷ್ಟಿಯಾಗಿಲ್ಲ. ತೀವ್ರ ವಾಯುಭಾರ ಕುಸಿತದ ಸಂದರ್ಭದಲ್ಲಿ ಸೈಕ್ಲೋನ್ನಲ್ಲಿ ಸುರಿಯುವ ಮಳೆಗಿಂತ ಜೋರಾಗಿ ಮಳೆ ಬೀಳುತ್ತದೆ'' ಎಂದು ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಹೇಳಿದ್ದಾರೆ.
ಇದನ್ನೂ ಓದಿ:ಎಡೆಬಿಡದೆ ಸುರಿಯುತ್ತಿರುವ ಮಳೆ: ಬೆಂಗಳೂರಿನ ಎಲ್ಲಾ ಶಾಲೆಗಳಿಗೆ ಇಂದು ರಜೆ