ಕರ್ನಾಟಕ

karnataka

ETV Bharat / state

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ರಾಜ್ಯದಲ್ಲಿ 5 ದಿನ ಮಳೆ ಮುನ್ಸೂಚನೆ - Karnataka Rain Forecast

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ರಾಜ್ಯದಲ್ಲಿ ಶುಕ್ರವಾರದಿಂದ ಮಳೆಯ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Rain forecast
ಮಳೆ (ETV Bharat)

By ETV Bharat Karnataka Team

Published : May 15, 2024, 6:54 AM IST

ಬೆಂಗಳೂರು:ರಾಜ್ಯದಲ್ಲಿ ಕಳೆದ ಹತ್ತು ದಿನಗಳಿಂದ ಅಲ್ಲಲ್ಲಿ ಮಳೆಯಾಗುತ್ತಿದ್ದು, ಇನ್ನೂ 5 ದಿನಗಳ ಕಾಲ ಮಳೆ ಮುಂದುವರೆಯಲಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಶುಕ್ರವಾರದಿಂದ ಭಾನುವಾರದವರೆಗೆ ವರ್ಷಧಾರೆಯ ಪ್ರಮಾಣ ಹೆಚ್ಚಾಗುವ ಮುನ್ಸೂಚನೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮೇ 17ರಿಂದ ಕರಾವಳಿ ಹಾಗೂ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆಗಳಿವೆ. ಮುಂಗಾರು ಪೂರ್ವ ಮಳೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಗುತ್ತಿದೆ. ಇದೇ ರೀತಿ ಇನ್ನೂ ಮೂರು ದಿನ ಮುಂದುವರೆಯಲಿದೆ. ಭಾಗಶಃ ಮೋಡ ಕವಿದ ವಾತಾವರಣ ಕಂಡುಬರುತ್ತಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಹಲವು ಕಡೆ ಮಳೆಯಾಗಲಿದೆ. ಕೆಲವೆಡೆ ಬಿರುಗಾಳಿ, ಮಿಂಚು, ಗುಡುಗು ಸಹಿತ ಮಳೆಯಾಗುವ ಸಂಭವವಿದೆ.

ಸೋಮವಾರವೂ ಕೂಡ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಯಾದಗಿರಿ, ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗಿದೆ.

ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಮಾರ್ಚ್ 1ರಿಂದ ಮೇ 13 ರವರೆಗೆ ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಕಡಿಮೆಯಾಗಿದೆ. ಶೇ. 40ರಷ್ಟು ಮಳೆ ಕೊರತೆಯಾಗಿರುವುದು ಕಂಡುಬಂದಿದೆ. ಈ ಅವಧಿಯಲ್ಲಿ ವಾಡಿಕೆ ಮಳೆ ಪ್ರಮಾಣ 86.2 ಮಿಲಿ ಮೀಟರ್‌ ಆಗಿದ್ದು, ಕೇವಲ 51.5 ಮಿಲಿ ಮೀಟರ್‌ ಮಾತ್ರ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮೂರ್ನಾಲ್ಕು ಜಿಲ್ಲೆಗಳನ್ನು ಹೊರತುಪಡಿಸಿದರೆ ರಾಜ್ಯದ ಬಹುತೇಕ ಭಾಗಗಳಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗಿದೆ. ಮೇ ತಿಂಗಳಿನಲ್ಲಿ ಮಳೆ ಪ್ರಾರಂಭವಾಗಿದ್ದರೂ ವ್ಯಾಪಕವಾಗಿ ಎಲ್ಲಾ ಕಡೆ ಮಳೆಯಾಗಿಲ್ಲ. ಒಂದು ಕಡೆ ಉತ್ತಮ ಮಳೆಯಾಗಿದ್ದರೆ, ಮತ್ತೊಂದು ಕಡೆ ಹಗುರ ಹಾಗೂ ಸಾಧಾರಣ ಮಳೆಯಾಗಿದೆ. ಇನ್ನೂ ಕೆಲವೆಡೆ ಮಳೆಯೇ ಆಗಿಲ್ಲ. ಕೆಲವು ಕಡೆ ಬಿರುಗಾಳಿ ಸಹಿತ ಭಾರೀ ಮಳೆಯೂ ಆಗಿದೆ. ಇದರಿಂದ ಮರ, ವಿದ್ಯುತ್‌ ಕಂಬಗಳು ಮುರಿದು ಬಿದ್ದಿವೆ. ಬಾಳೆ, ಮಾವು ಸೇರಿದಂತೆ ವಿವಿಧ ಬೆಳೆಗಳು ನಾಶವಾಗಿವೆ.

ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಮುಂದುವರೆದ ವರುಣನ ಅಬ್ಬರ : ಬಿರುಗಾಳಿ ಸಹಿತ ಭಾರಿ ಮಳೆ - Heavy rainfall

ABOUT THE AUTHOR

...view details