ಬೆಂಗಳೂರು: ಟಿಕೆಟ್ ಖರೀದಿಸಿದ ನಿಲ್ದಾಣವನ್ನು ಮೀರಿ ಪ್ರಯಾಣಿಸಿದ ಸಂದರ್ಭದಲ್ಲಿ ಪ್ರಯಾಣಿಕರು ಕಾರಣಾಂತರಗಳಿಂದ ಮೃತಪಟ್ಟಲ್ಲಿ ರೈಲ್ವೆ ಇಲಾಖೆ ಪರಿಹಾರ ಪಾವತಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಪ್ರಯಾಣಿಕ ಇಳಿಯಬೇಕಾದ ನಿಲ್ದಾಣದ ಬಳಿಕ 5 ಕಿಲೋ ಮೀಟರ್ ದೂರದಲ್ಲಿ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ 4 ಲಕ್ಷ ರೂ ಪರಿಹಾರ ನೀಡುವಂತೆ ಸೂಚನೆ ನೀಡಿದ್ದ ರೈಲ್ವೆ ನ್ಯಾಯಾಧೀಕರಣದ ಕ್ರಮ ಪ್ರಶ್ನಿಸಿ ನೃಋತ್ಯ ರೈಲ್ವೆ ವ್ಯವಸ್ಥಾಪಕ ನಿರ್ದೇಶಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ಟಿಕೆಟ್ ಖರೀದಿಸಿದ ನಿಲ್ದಾಣವನ್ನು ಮೀರಿ ಪ್ರಯಾಣ ಮಾಡಿದ ಪ್ರಯಾಣಿಕನನ್ನು ಅನಧಿಕೃತ ಮತ್ತು ಟಿಕೆಟ್‌ರಹಿತ ಪ್ರಯಾಣಿಕ ಎಂದು ಪರಿಗಣಿಸಲಾಗುವುದಿಲ್ಲ. ಮೃತರು ರೈಲಿನಿಂದ ಕೆಳಗಿಳಿಯುವ ಸಂದರ್ಭದಲ್ಲಿ ಬಿದ್ದು ಗಾಯಗಳಾಗಿವೆ ಎಂಬುದಕ್ಕೆ ಸಾಕ್ಷಿಗಳು ಮತ್ತು ಮರಣೋತ್ತರ ವರದಿಯಲ್ಲಿ ಗೊತ್ತಾಗಿದೆ.
ಸುಪ್ರೀಂ ಕೋರ್ಟ್ ಪ್ರಕರಣವೊಂದರಲ್ಲಿ ಒಂದು ಮಾರ್ಗದ ಟಿಕೆಟ್ ಪಡೆದು ಮತ್ತೊಂದು ಮಾರ್ಗದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಮೃತಪಟ್ಟಿದ್ದರೂ ಪರಿಹಾರ ತಿರಸ್ಕರಿಸಲಾಗುವುದಿಲ್ಲ ಎಂದು ಹೇಳಿದೆ. ಆದ್ದರಿಂದ ಈ ಪ್ರಕರಣದಲ್ಲಿ ಮೃತರು ಟಿಕೆಟ್ ಖರೀದಿಸಿದ ನಿಲ್ದಾಣವನ್ನು ಮೀರಿ ಪ್ರಯಾಣ ಬೆಳೆಸಿದ್ದರೂ ಪರಿಹಾರ ನೀಡುವಂತೆ ನ್ಯಾಯಾಧೀಕರಣದ ಆದೇಶದಲ್ಲಿ ಯಾವುದೇ ಲೋಪವಿಲ್ಲ ಎಂದು ಅಭಿಪ್ರಾಯಪಟ್ಟು, ರೈಲ್ವೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿತು.