ಬೆಂಗಳೂರು:ಅಸ್ಸಾಂನಲ್ಲಿ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ನೇತೃತ್ವದ 'ಭಾರತ್ ಜೋಡೋ ನ್ಯಾಯ ಯಾತ್ರೆ'ಗೆ ಬಿಜೆಪಿ ಕಾರ್ಯಕರ್ತರು ಅಡ್ಡಗಟ್ಟಿರುವುದನ್ನು ಖಂಡಿಸಿ ಇಂದು ರಾಜ್ಯ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.
ರಾಹುಲ್ ಸಾಗುತ್ತಿದ್ದ ಬಸ್ ಅಡ್ಡಗಟ್ಟಿ ಅವರ ಮೇಲೆ ದಾಳಿ ನಡೆಸಲು ಯತ್ನಿಸಲಾಗಿದೆ ಎಂದು ಆರೋಪಿಸಿ ಬೆಂಗಳೂರು ಕೇಂದ್ರ, ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ವಿಮ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ವತಿಯಿಂದ ಬೆಳಿಗ್ಗೆ 11.30 ಗಂಟೆಗೆ ಸ್ವಾತಂತ್ರ್ಯ ಉದ್ಯಾನವನದದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರುಗಳು, ಸಂಸದರು, ಸಚಿವರುಗಳು, ಶಾಸಕರುಗಳು, ಕೆಪಿಸಿಸಿ ಪದಾಧಿಕಾರಿಗಳು, ಮಾಜಿ ಬಿಬಿಎಂಪಿ ಸದಸ್ಯರುಗಳು, ಮುಂಚೂಣಿ ಘಟಕ ವಿಭಾಗಗಳ ಮುಖ್ಯಸ್ಥರು ಹಾಗೂ ಪಕ್ಷದ ಹಿರಿಯ ಮುಖಂಡರುಗಳು ಭಾಗವಹಿಸಲಿದ್ದಾರೆ.
ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಎಲ್ಲ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವಂತೆ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಸಂಬಂಧಪಟ್ಟ ಜಿಲ್ಲೆಯ ಸಂಸದರು, ಶಾಸಕರು, ಮಾಜಿ ಸಂಸದರು, ಮಾಜಿ ಶಾಸಕರು, ಕೆಪಿಸಿಸಿ ಸದಸ್ಯರು, ಡಿಸಿಸಿ/ಬಿಸಿಸಿ ಅಧ್ಯಕ್ಷರು, ಪದಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಸದಸ್ಯರು, ಮಾಜಿ ಸದಸ್ಯರು, ಮುಂಚೂಣಿ ಘಟಕ, ಸೆಲ್ ವಿಭಾಗಗಳ ಮುಖ್ಯಸ್ಥರು ಹಾಗೂ ಎಲ್ಲ ಹಂತದ ಪದಾಧಿಕಾರಿಗಳು ಪಾಲ್ಗೊಳ್ಳುವಂತೆ ಸೂಚಿಸಲಾಗಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಟ್ವೀಟ್ ಮಾಡಿದ್ದು, 'ಅಸ್ಸಾಂನಲ್ಲಿ ಸಂಪೂರ್ಣ ಕಾನೂನುಬಾಹಿರತೆಯನ್ನು ಪ್ರದರ್ಶಿಸಲಾಗಿದೆ. ನ್ಯಾಯಯಾತ್ರೆಯ ಉದ್ದಕ್ಕೂ ಅಸ್ಸಾಂ ಸಿಎಂ ತಮ್ಮ ಗೂಂಡಾಗಳ ಮೂಲಕ ದಾಳಿ ನಡೆಸಿದ್ದಾರೆ. ಈ ಮೂಲಕ ನಮ್ಮ ಶಾಂತಿಯುತ ಯಾತ್ರೆಗೆ ಅಡ್ಡಿಪಡಿಸಿದ್ದಾರೆ. ಇಂಥ ಅಡ್ಡಿಗಳು ನಮ್ಮನ್ನು ತಡೆಯುತ್ತದೆ ಎಂದು ತಪ್ಪಾಗಿ ಭಾವಿಸಿದ್ದಾರೆ. ಈ ಘಟನೆಗಳು ಅವರ ಮತ್ತು ನರೇಂದ್ರ ಮೋದಿಯವರ ಸೋಲನ್ನು ಖಚಿತಪಡಿಸಿಕೊಳ್ಳಲು ನಮಗೆ ಅಧಿಕ ಶಕ್ತಿ ನೀಡಿದೆ' ಎಂದು ಟೀಕಿಸಿದ್ದಾರೆ.
ಶಂಕರದೇವ ದೇಗುಲಕ್ಕೆ ಪ್ರವೇಶ ನಿರ್ಬಂಧ, ರಾಹುಲ್ ಅಸಮಾಧಾನ:ಒಂದೆಡೆ ನ್ಯಾಯಯಾತ್ರೆಗೆ ಅಡ್ಡಿಯಾದರೆ ಇನ್ನೊಂದೆಡೆ, ನಿನ್ನೆ ಶಂಕರ ದೇವಾಲಯಕ್ಕೆ ರಾಹುಲ್ ಗಾಂಧಿಗೆ ಪ್ರವೇಶ ನಿರಾಕರಿಸಲಾಯಿತು. ರಾಹುಲ್, ಶಂಕರದೇವರ ಜನ್ಮಸ್ಥಳಕ್ಕೆ ಹೊರಟಿದ್ದರು. ಆದರೆ ದೇವಾಲಯದ ಆಡಳಿತ ಮಂಡಳಿ ಪ್ರವೇಶ ನಿರಾಕರಿಸಿತ್ತು. ಈ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, 'ಶಂಕರದೇವರು ಭಕ್ತಿಯ ಮೂಲಕ ಭಾರತದ ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಏಕತೆಯನ್ನು ತೋರಿಸಿಕೊಟ್ಟವರು. ಆದರೆ ಇಂದು ಅವರ ಜನ್ಮಸ್ಥಳದಲ್ಲಿ ನಾನು ತಲೆಬಾಗಿ ಅವರಿಗೆ ನಮಸ್ಕರಿಸುವುದನ್ನು ತಡೆಹಿಡಿಯಲಾಗಿದೆ. ಇದರಿಂದಾಗಿ ದೇವಾಲಯದ ಹೊರಗೆ ಭಗವಂತನಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡೆ. ಇಂಥ ಅಧಿಕಾರು ದುರುಪಯೋಗದ ವಿರುದ್ಧ ನಾವು ಹೋರಾಟ ಮುಂದುವರೆಸುತ್ತೇವೆ"ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ರಾಮಲಲ್ಲಾ ಮೂರ್ತಿಯ ಶಿಲೆ ಸಿಕ್ಕ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆ, ಪ್ರತಾಪ್ ಸಿಂಹಗೆ ಘೇರಾವ್