ಮಂಡ್ಯ: ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದರೆ ಈಗಾಗಲೇ ನೀಡುತ್ತಿರುವ 24 ಸಾವಿರ ರೂಪಾಯಿಗೆ 1 ಲಕ್ಷ ರೂ. ಸೇರಿಸಿ ಬಡ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ 24 ಸಾವಿರ ರೂ. ನೀಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಿಸಿದರು. ಮಂಡ್ಯದ ಪಿಇಎಸ್ ಕಾಲೇಜು ಮೈದಾನದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಎನ್ಡಿಎ ಅಭ್ಯರ್ಥಿ, ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ ಮಹಿಳೆಯರಿಗೆ ಪ್ರತಿ ತಿಂಗಳು ಎಂಟೂವರೆ ಸಾವಿರ ರೂಪಾಯಿ ನೇರವಾಗಿ ಅವರ ಖಾತೆಗೆ ಜಮಾ ಮಾಡುವ ಯೋಜನೆ ಜಾರಿಗೆ ತರಲಾಗುವುದು. ಅದರ ಜೊತೆಗೆ ಈಗ ರಾಜ್ಯ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಮಾಸಿಕ 2,000 ರೂಪಾಯಿ ಮುಂದುವರೆಯುತ್ತದೆ. ಪ್ರತಿ ಬಡ ಕುಟುಂಬದ ಮಹಿಳೆಯ ಖಾತೆಗೆ ಪ್ರತಿ ತಿಂಗಳು ಒಟ್ಟು ಹತ್ತೂವರೆ ಸಾವಿರ ರೂಪಾಯಿ ಜಮಾ ಆಗಲಿದೆ. ಇದೊಂದು ಕ್ರಾಂತಿಕಾರಕ ಹೆಜ್ಜೆ. ಈ ಮೂಲಕ ಕೋಟ್ಯಂತರ ಮಹಿಳೆಯ ಆರ್ಥಿಕ ಪರಿಸ್ಥಿತಿ ಬದಲಾಗಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯುವಕರು ಸೇರಿದಂತೆ ಎಲ್ಲ ವರ್ಗದವರನ್ನು ಮೇಲೆತ್ತುವ ಕೆಲಸ ಮಾಡಲಾಗುವುದು. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಇಷ್ಟಕ್ಕೆ ಮಾತ್ರ ಸೀಮಿತವಾಗಲ್ಲ. ಪದವೀಧರ ನಿರುದ್ಯೋಗಿ ಯುವಕರಿಗೆ ಕೆಲಸ ನೀಡುವಂತಹ ಹೊಸ-ಹೊಸ ಯೋಜನೆ ಕೂಡ ತರಲಿದ್ದೇವೆ ಎಂದು ಯುವ ಮತದಾರರನ್ನು ಗಮನ ಸೆಳೆಯುವ ಮಾತುಗಳನ್ನು ಆಡಿದರು.
ದೇಶದಲ್ಲಿ ನಡೆದಿರುವ ಚುನಾವಣಾ ಬಾಂಡ್ ಭ್ರಷ್ಟಾಚಾರವು ವಿಶ್ವದಲ್ಲಿಯೇ ನಡೆದಿರುವ ದೊಡ್ಡ ಹಗರಣವಾಗಿದೆ. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಬಹುದೊಡ್ಡ ಹಗರಣದ ಸಮರ್ಥನೆಗೆ ಮುಂದಾಗಿದ್ದಾರೆ. ಈಗಲೂ ಸಹ ಎಲ್ಲಿಂದ ಹಣ ಬಂದಿದೆ ಎಂಬುದು ರಹಸ್ಯವಾಗಿದೆ ಎಂದು ಕೇಂದ್ರದ ವಿರುದ್ಧದ ರಾಹುಲ್ ಗಾಂಧಿ ಕಿಡಿಕಾರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಮಾಜಿ ಸಿಎಂ ಕುಮಾರಸ್ವಾಮಿ ಅವರು ಸೋಲಿನ ಭೀತಿಯಿಂದ ಜಿಲ್ಲೆಯನ್ನೇ ಬಿಟ್ಟು ಮಂಡ್ಯಕ್ಕೆ ಬಂದಿದ್ದಾರೆ. ಮಂಡ್ಯಕ್ಕೆ ಕುಮಾರಸ್ವಾಮಿಯವರ ಕೊಡುಗೆ ಶೂನ್ಯ. ಈ ಬಾರಿ ಕಾಲ ಬದಲಾಗಿದೆ. ಜನರ ಒಲವು ನಮ್ಮ ಕಡೆ ಇದೆ. ಐದೂ ಗ್ಯಾರಂಟಿಗಳು ಜನರ ಪರವಾಗಿದೆ. ಹಾಗಾಗಿ ನಮ್ಮ ಅಭ್ಯರ್ಥಿ ವೆಂಕಟರಮಣೇಗೌಡ ಅಲಿಯಾಸ್ ಸ್ಟಾರ್ ಚಂದ್ರು ಗೆಲುವು ನಿಶ್ಚಿತ. ಕಳೆದ ಬಾರಿ ನಿಖಿಲ್ ಕುಮಾರಸ್ವಾಮಿ ಹೇಗೆ ಸೋತ್ರೋ ಹಾಗೆ ಕುಮಾರಸ್ವಾಮಿ ಸೋಲು ಕೂಡ ಖಚಿತ. ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ ಇನ್ನಷ್ಟು ಗ್ಯಾರಂಟಿಗಳು ಜನರಿಗೆ ತಲುಪುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ರಾಹುಲ್ ಗಾಂಧಿ ಭಾರತ್ ಜೋಡೋ ನಡೆಸಿದ ಕಡೆಯೆಲ್ಲಾ ಕಾಂಗ್ರೆಸ್ ಗೆದ್ದು ಬೀಗಿದೆ. ರಾಹುಲ್ ಗಾಂಧಿಯವರ ಕಾಲ್ಗುಣ ಶಕ್ತಿ ಶಾಲಿಯಾಗಿದೆ. ಮಂಡ್ಯ ಗೆದ್ದರೆ ಇಂಡಿಯಾ ಗೆದ್ದಂತೆ. ವಿರೋಧ ಪಕ್ಷದ ಅಭ್ಯರ್ಥಿ ಬಗ್ಗೆ ಮಾತನಾಡಲ್ಲ ಎಂದು ಹೇಳುತ್ತಲೇ ಪರೋಕ್ಷವಾಗಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ಕಳೆದ ಬಾರಿ ಡಬಲ್ ಇಂಜಿನ್ ಸರ್ಕಾರವಿದ್ದರೂ ಮೇಕೆದಾಟು ಯೋಜನೆಗೆ ಅವಕಾಶ ಕೊಡಲಿಲ್ಲ. ನಾವು ಮೇಕೆದಾಟು ಯೋಜನೆಯನ್ನ ಮಾಡೇ ಮಾಡ್ತೀವಿ ಎಂದೇಳಿ ನಮ್ಮ ಅಭ್ಯರ್ಥಿ ಸ್ಟಾರ್ ಚಂದ್ರು ಅವರನ್ನು ಗೆಲ್ಲಿಸಿಕೊಡುವಂತೆ ಮನವಿ ಮಾಡಿದರು.
ಇದನ್ನೂ ಓದಿ:2014ರಲ್ಲಿ ಭರವಸೆ, 2019ರಲ್ಲಿ ನಂಬಿಕೆ ಇತ್ತು; 2024ರಲ್ಲಿದೆ ಗ್ಯಾರಂಟಿ: ಪ್ರಧಾನಿ ಮೋದಿ - PM Modi