ಬೆಂಗಳೂರು:ಹೃದಯದಲ್ಲಿ ಟಿಪ್ಪು ಇಟ್ಟುಕೊಂಡು ಬಾಯಲ್ಲಿ ಜೈ ಶ್ರೀರಾಮ್ ಎಂದರೆ ಯಾವುದೇ ಉಪಯೋಗವಿಲ್ಲ. ರಾಮ ಮಂದಿರದ ಸಂಪೂರ್ಣ ಶ್ರೇಯ ಪ್ರಧಾನಿ ಮೋದಿ ಅವರಿಗೆ ಸಲ್ಲಿಕೆಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಅರಮನೆ ಮೈದಾನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಹೊಸ ನಾಯಕತ್ವ ಬಂದ ನಂತರ ಮೊದಲ ಕಾರ್ಯಕಾರಣಿ ಸಭೆ ನಡೆಸಲಾಯಿತು. ರಾಮ ಮಂದಿರ ನಿರ್ಮಾಣ ಮಾಡುವ ನೇತೃತ್ವ ಪ್ರಧಾನಿ ಮೋದಿ ತೆಗೆದುಕೊಂಡು 500 ವರ್ಷದ ಗುಲಾಮಗಿರಿಯ ಸಂಕೇತ ತೊಲಗಿ ದೇಶಕ್ಕೆ ಕೀರ್ತಿ ಗೌರವ ತಂದಿದ್ದಕ್ಕಾಗಿ, ನಿರ್ಣಯ ಮಂಡಿಸಿ ಒಮ್ಮತದಿಂದ ಅಂಗೀಕರಿಸಲಾಯಿತು. ಬಾಬರ್ ಸೂಚನೆಯಂತೆ ರಾಮ ಮಂದಿರ ಕೆಡವಲಾಗಿತ್ತು. ಈಗ ಪುನರ್ ನಿರ್ಮಾಣ ಮಾಡಲಾಗಿದೆ. ಇದರ ಸಂಪೂರ್ಣ ಕ್ರೆಡಿಟ್ ಮೋದಿಗೆ ಸಲ್ಲಬೇಕು. ಇವರ ಜೊತೆ ಕರ ಸೇವಕರು ಹಾಗೂ ಪಾದರಕ್ಷೆ ಹಾಕದೇ ವಾದ ಮಂಡಿಸಿದ ವಕೀಲ ಪರಾಶರನ್ ಅವರಿಗೂ ಸಲ್ಲಬೇಕು ಎಂದರು.
ಸೋಮನಾಥ ಮಂದಿರ ಉದ್ಘಾಟನೆಗೆ ಹೋಗದಂತೆ ರಾಷ್ಟ್ರಪತಿಗೆ ಅಂದಿನ ಪ್ರಧಾನಿ ನೆಹರೂ ಹೇಳಿದ್ದರು. ಆದರೆ, ಈಗ ರಾಮ ಮಂದಿರ ಉದ್ಘಾಟನೆ ರಾಷ್ಟ್ರಪತಿ ಮಾಡಬೇಕು ಎನ್ನುವ ದ್ವಂದ್ವ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು ನೀಡಿದ್ದಾರೆ. ವಿವಾದಾತ್ಮಕ ಭೂಮಿ, ರಾಮ ಕಾಲ್ಪನಿಕ ಎಂದ ಸಿದ್ದರಾಮಯ್ಯ ಈಗ ಜೈಶ್ರೀರಾಮ್ ಎನ್ನುತ್ತಾರೆ. ಹೃದಯದಲ್ಲಿ ಟಿಪ್ಪು ಇರಿಸಿಕೊಂಡು ಶ್ರೀರಾಮ್ ಎಂದು ಬಾಯಲ್ಲಿ ಹೇಳಿದರೆ ಏನು ಉಪಯೋಗ ಎಂದರು.
ಕಾಂಗ್ರೆಸ್ ಜನವಿರೋಧಿ ನೀತಿ ವಿರುದ್ಧ ಬಸವರಾಜ ಬೊಮ್ಮಾಯಿ ನಿಲುವಳಿ ಮಂಡಿಸಿದರು. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ, ಇದರ ಬಗ್ಗೆ ವಿವರವಾದ ನಿಲುವಳಿಗೆ ಸಭೆ ಅಂಗೀಕರಿಸಿತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೇಂದ್ರದಿಂದ ಅನ್ಯಾಯ ಎನ್ನುವ ಕಾಂಗ್ರೆಸ್ ಆರೋಪದ ಕುರಿತು ನಿಲುವಳಿ ಮಂಡಿಸಿದರು. ರೈಲ್ವೆ, ಲೋಕೋಪಯೋಗಿ, ಬರ ಪರಿಹಾರ ವಿಚಾರದಲ್ಲಿ ಸೇರಿ ಯಾವುದರಲ್ಲಿಯೂ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ ಎನ್ನುವ ಅಂಶವನ್ನು ವರದಿ ಮಾಡಿದ್ದಾರೆ ಎಂದರು.
ಚುನಾವಣಾ ಕಾರ್ಯ ಯೋಜನೆ ಯಾವ ರೀತಿ ಮಾಡಬೇಕು, ಅಧಿವೇಶನಕ್ಕೆ ಮೊದಲು ರೈತರಿಗೆ ಸರ್ಕಾರ ಮಾಡಿರುವ ದ್ರೋಹದ ಕುರಿತು ಜಾಗೃತಿ ಮೂಡಿಸಬೇಕು ಎನ್ನುವ ನಿರ್ಧಾರ ಮಾಡಿದ್ದು, ಮುಲ್ಲಾಗಳಿಗೆ 10 ಸಾವಿರ ಕೋಟಿ, ರೈತರಿಗೆ 105 ಕೋಟಿ ಇದು ಈ ಸರ್ಕಾರದ ನೀತಿಯಾಗಿದೆ. ಇದರ ವಿರುದ್ಧ ನಮ್ಮ ಹೋರಾಟ ನಡೆಸಲು ನಿರ್ಧಾರ ಮಾಡಲಾಯಿತು ಎಂದರು.
ಯತ್ನಾಳ್ ಗೈರಿನ ಕುರಿತು ಪ್ರತಿಕ್ರಿಯೆ ನೀಡಿದ ಅಶೋಕ್, ಆಹ್ವಾನಿತರಿಗೆಲ್ಲ ಆಹ್ವಾನ ಹೋಗಿದೆ, ಬಾರದವರ ಜೊತೆ ಮಾತನಾಡಲಿದ್ದೇವೆ, ಎಲ್ಲ ಬಗೆಹರಿದಿದೆ, 28 ಸ್ಥಾನ ಗೆಲ್ಲುವ ಕಡೆ ಗಮನ ಹರಿಸಲಿದ್ದೇವೆ. ಸೋಮಶೇಖರ್ ವಿಷಯ ಐದಾರು ತಿಂಗಳಿನಿಂದಲೂ ನಡೆಯುತ್ತಿದೆ. ಬಿಜೆಪಿ ಬಿಡಲ್ಲ ಎಂದು ನನ್ನ ಬಳಿ ಹೇಳಿದ್ದಾರೆ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರದ ಜೊತೆ ಹೋಗಬೇಕಿದೆ ಎನ್ನುವುದನ್ನು ಗಮನಕ್ಕೆ ತಂದಿದ್ದಾರೆ. ಅವರು ಪಕ್ಷದ ವಿರುದ್ಧ ನಡೆದುಕೊಳ್ಳುತ್ತಿಲ್ಲ, ಪಕ್ಷದ ವಿರುದ್ಧ ಹೇಳಿಕೆಗಳನ್ನೂ ಕೂಡಾ ನೀಡಿಲ್ಲ ಹಾಗಾಗಿ, ಕ್ರಮದಂತಹ ಪ್ರಶ್ನೆ ಬರಲ್ಲ, ಇನ್ನು ಕೆಲ ಶಾಸಕರು, ಸಂಸದರು ಬಂದಿಲ್ಲ ಎಂದು ಸೋಮಶೇಖರ್ ಗೈರಿನ ಕುರಿತು ಸ್ಪಷ್ಟೀಕರಣ ನೀಡಿದರು.