ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿಕೆ (ETV Bharat) ಬೆಂಗಳೂರು:"ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣ ಆರೋಪ ಪ್ರಕರಣದ ಹೋರಾಟವನ್ನು ದೆಹಲಿ ಮಟ್ಟಕ್ಕೆ ಕೊಂಡೊಯ್ಯುವ ಚಿಂತನೆ ಇದ್ಧು, ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿದ ಕುರಿತು ಕೋರ್ಟ್ ಕೇಸ್ ಏನಾಗಲಿದೆ ಎಂದು ನೋಡಿ ಮುಂದಿನ ನಿರ್ಧಾರ ಮಾಡಲಾಗುತ್ತದೆ" ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಜಾಲಹಳ್ಳಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಮುಡಾ ಹಗರಣ ಪ್ರಕರಣ ಸಂಬಂಧ ಸಿಎಂ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸಿದ್ದೇವೆ. ಈಗ ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿದ್ದಾರೆ. ಆದರೆ, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ಬದಲು ಸಿದ್ದರಾಮಯ್ಯ ಕೋರ್ಟ್ಗೆ ಹೋಗಿದ್ದಾರೆ".
"ಆದರೆ, ಪ್ರಕರಣ ತಾರ್ಕಿಕ ಅಂತ್ಯ ಕಾಣುವವರೆಗೂ ಬಿಜೆಪಿ ಹೋರಾಟ ಮುಂದುವರೆಸಲಿದೆ. ಬಿಜೆಪಿ ಈ ಹೋರಾಟವನ್ನು ದೆಹಲಿ ಮಟ್ಟಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿದೆ. ಈ ಸಂಬಂಧ ಜೆಡಿಎಸ್ ಜೊತೆ ಚರ್ಚೆ ಮಾಡುತ್ತಿದ್ದೇವೆ. ಚರ್ಚೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಗುರುವಾರ ಕೋರ್ಟ್ನಲ್ಲಿ ಕೇಸ್ ಕೂಡ ಬರಲಿದೆ ಅದನ್ನು ನೋಡಿಕೊಂಡು ಮುಂದೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಿದ್ದೇವೆ" ಎಂದರು.
ಶಾಸಕ ರವಿಕುಮಾರ್ ಗಣಿಗರಿಗೆ ತಿರುಗೇಟು: ಸರ್ಕಾರ ಬೀಳಿಸಲು ಬಿಜೆಪಿ ಯತ್ನಿಸುತ್ತಿದೆ ಎನ್ನುವ ಶಾಸಕ ರವಿಕುಮಾರ್ ಗಣಿಗ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅಶೋಕ್, "ಸರ್ಕಾರ ಹಗರಣದಲ್ಲಿ ಸಿಲುಕಿದೆ. ಜನರ ಮನಸ್ಸಿನ ವಿಷಯ ಡೈವರ್ಟ್ ಮಾಡುವ ವಿಚಾರ ಇದಾಗಿದೆ. ಡಿ.ಕೆ. ಶಿವಕುಮಾರ್ ಹೋಗಿ ಬಿಜೆಪಿ ಸೆಂಟ್ರಲ್ ಲೀಡರ್ಸ್ ಭೇಟಿ ಮಾಡುತ್ತಿದ್ದಾರೆ. ಸರ್ಕಾರ ಇರುತ್ತೋ, ಬೀಳುತ್ತೋ ಅನ್ನೋ ಆತಂಕದಲ್ಲಿದ್ದಾರೆ. ನಾವ್ಯಾರು ಕೂಡ ಸರ್ಕಾರ ಬೀಳಿಸಲ್ಲ. ನಾವು ಕಾಂಗ್ರೆಸ್ ನಾಯಕರಿಗೆ ಕೇಳ್ತೀನಿ.. ಯಾವ ಲೀಡರ್ ನಿಮ್ಮಬಳಿ ಬಂದು ಮಾತಾಡಿದ್ದಾರೆ ಹೆಸರೇಳಿ. ಇಲ್ಲದಿದ್ದರೆ ನೀವು ಹಿಟ್ ಅಂಡ್ ರನ್ ಆಗ್ತೀರಿ. ಇದು ಭ್ರಷ್ಟಾಚಾರ ಮುಚ್ಚಿ ಹಾಕುವ ಮತ್ತು ವಿಷಯ ಡೈವರ್ಟ್ ಮಾಡುವ ವಿಚಾರವಷ್ಟೇ" ಎಂದರು.
'ಮುಂದೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ'- ಅಶೋಕ್: "ಸರ್ಕಾರ ಗ್ಯಾರಂಟಿ ಹೆಸರು ಹೇಳಿ ಸೋತಿದೆ. ಎಲ್ಲದರ ಬೆಲೆ ಏರಿಕೆ ಮಾಡುತ್ತಿದೆ. ಸರ್ಕಾರಕ್ಕೆ ನಷ್ಟವಾಗುತ್ತಿದೆ. ಹಾಲು, ಬಸ್, ನೀರು ದರ ಹೆಚ್ಚಳ ಮಾಡಿದ್ದೀರಿ. ಕುಡಿಯುವ ಗಾಳಿಗೆ ಟ್ಯಾಕ್ಸ್ ಹಾಕಿದರೆ. ಇನ್ನೇನೂ ಉಳಿಯಲ್ಲ. ಗಾಳಿ ಮೇಲೆ ತೆರಿಗೆ ಹಾಕಿದರೆ. ನೋಬೆಲ್ ಪ್ರಶಸ್ತಿ ಕೊಡುತ್ತಾರೆ. ನೀವು ಪಾಪರ್ ಆಗಿದ್ದೀರಿ. ಮುಂದಾಲೋಚನೆ ಇಲ್ಲದೇ, ಹಣ ಇಡದೆ ತೆರಿಗೆ ಬಾರ ಹಾಕಿದ್ದಾರೆ. ಮತದಾರರ ಬಗ್ಗೆ ಕೀಳಾಗಿ ಮಾತಾಡುತ್ತಿದ್ದಾರೆ. ಅವರಿಗೆ ಮುಂದೆ ನಾವು ಅಧಿಕಾರಕ್ಕೆ ಬರಲ್ಲ ಅಂತ ಅನ್ನಿಸಿದೆ. ಹಾಗಾಗಿ ಈಗ ಎಷ್ಟಾಗುತ್ತೋ ಅಷ್ಟು ಲೂಟಿ ಹೊಡೆಯೋಣ ಅಂತ ಹೊರಟಿದ್ದಾರೆ. ಮುಂದೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಈಗ ಯಾರ್ಯಾರು ಸಿಎಂ ಆಗಬೇಕೋ ಆಗೋಣ ಅಂತ ಅವರಿಗನಿಸಿದೆ" ಎಂದು ಟೀಕಿಸಿದರು.
ಮುಂದುವರೆದು, "ಕಾರ್ಕಳದಲ್ಲಿ ಅತ್ಯಾಚಾರ ಬಗ್ಗೆ ಸುನಿಲ್ ಕುಮಾರ್ ಮಾತಾಡಿದ್ದಾರೆ. ಹುಬ್ಬಳ್ಳಿ, ಹಾವೇರಿ ಆಯಿತು. ಈಗ ಕಾರ್ಕಳದಲ್ಲಿ ಲವ್ ಜಿಹಾದ್ ನಡೆಯುತ್ತಿದೆ. ಮತ್ತು ಬರಿಸುವ ಪದಾರ್ಥ ನೀಡಿ ಅತ್ಯಾಚಾರ ಮಾಡಿದ್ದಾರೆ. ವಾಟ್ಸ್ಆ್ಯಪ್ ಮಾಡೋದು, ಕಾರಲ್ಲಿ ಕರೆತಂದು ಅತ್ಯಾಚಾರ ಮಾಡೋದು. ಯಾರು ಇವರಿಗೆ ಕಾರು ಕೊಡುತ್ತಾರೆ?. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಇವರಿಗೆ ಗೇಟ್ ಓಪನ್ ಆಗಿದೆ. ಲವ್ ಜಿಹಾದ್ ಕೆಲಸ ಇವರ ಕುಮ್ಮಕ್ಕಿನಿಂದ ಆಗಿದೆ. ಇದಕ್ಕೆಲ್ಲಾ ಕೇರಳ ಟ್ರೈನಿಂಗ್ ಸೆಂಟರ್. ವಿದೇಶಿಯರ ಕೈವಾಡ ಕೂಡ ಇದೆ. ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡುವುದಾಗಿ ಹೇಳಿದ್ದಾರೆ. 2047ರ ಒಳಗೆ ಮುಸ್ಲಿಂ ರಾಷ್ಟ್ರ ಮಾಡುವುದಾಗಿ ಕರಪತ್ರ ಮಾಡಿರುವುದು ಸಿಕ್ಕಿದೆ. ಎನ್ಐಎ ಈ ಕರಪತ್ರ ಕೋಟ್ಟಿರೋದೇ ಸಾಕ್ಷಿ" ಎಂದರು.
ನಟ ದರ್ಶನ್ ಜೈಲಲ್ಲಿ ರಾಜ್ಯಾತೀಥ್ಯ ಬಗ್ಗೆ: ನಟ ದರ್ಶನ್ ಜೈಲಲ್ಲಿ ಬಿಂದಾಸ್ ಆಗಿರುವ ಬಗ್ಗೆ, "ಈ ಸಂಬಂಧ ಈಗಾಗಲೇ ಗೃಹಸಚಿವರು ಹೇಳಿಕೆ ನೀಡಿದ್ದಾರೆ. ಜೈಲಲ್ಲಿ ರೇಡ್ ಮಾಡಿದ್ದಾರೆ. ಆದರೆ ಫೋಟೋ ತೆಗೆಯೋಕೆ ಮೊಬೈಲ್ ಎಲ್ಲಿ ಸಿಕ್ಕಿತು. ಜೈಲಲ್ಲಿ ರಾಜಾರೋಷವಾಗಿ ಎಲ್ಲವೂ ನಡೆಯುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ. ಇಷ್ಟೆಲ್ಲಾ ಅತ್ಯಾಚಾರ ಆಗುತ್ತಿದೆ. ಕೆಲ ಮಂತ್ರಿಗಳು ನಮಗೆ ಯಾವ ಖಾತೆ ಸಿಗುತ್ತೆ, ಯಾವ ಖಾತೆ ಹೋಗುತ್ತೆ ಎನ್ನುವ ಭೀತಿಯಲ್ಲಿದ್ದಾರೆ. ಜೈಲಲ್ಲಿ ನಡೆದ ಘಟನೆ ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲ ಎನ್ನುವುದಕ್ಕೆ ಇದು ನಿದರ್ಶನ. ಕಾಂಗ್ರೆಸ್ ಸರ್ಕಾರ ಇದಕ್ಕೆ ಉತ್ತರ ಕೊಡಬೇಕು" ಎಂದು ಒತ್ತಾಯಿಸಿದರು.
ಚನ್ನಪಟ್ಟಣ ಟಿಕೆಟ್ ವಿಚಾರ: ಕೊನೆಗೆ ಚನ್ನಪಟ್ಟಣ ಟಿಕೆಟ್ ವಿಚಾರದ ಕುರಿತು ಆರ್. ಅಶೋಕ್, " ಟಿಕೆಟ್ ನಿರ್ಧಾರವಾಗಿಲ್ಲ. ನಾನು, ಅಶ್ವತ್ಥ ನಾರಾಯಣ್ ಕೂಡ ಸಿ.ಪಿ. ಯೋಗೇಶ್ವರ್ ಭೇಟಿ ಮಾಡಿದ್ದೇವೆ. ಕುಮಾರಸ್ವಾಮಿ ಜೊತೆ ಕೂಡ ಚರ್ಚೆ ಮಾಡಿದ್ದೇವೆ. ನಾವೆಲ್ಲಾ ಹೈಕಮಾಂಡ್ ಬಳಿ ಹೋಗಿ ಯೋಗೇಶ್ವರ್‌ಗೆ ಟಿಕೆಟ್ ಕೇಳಲಿದ್ದೇವೆ. ನಾವೆಲ್ಲಾ ಯಾವಾಗ ಹೋಗುತ್ತೀವಿ ಅಂತ ಶೀಘ್ರದಲ್ಲೇ ತಿಳಿಸುತ್ತೇವೆ" ಎಂದರು.
ಇದನ್ನೂ ಓದಿ:ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ಗೆ ರಾಜಾತಿಥ್ಯ: 7 ಜೈಲು ಅಧಿಕಾರಿಗಳ ಅಮಾನತು - Actor Darshan Photo Viral