ಬೆಂಗಳೂರು: ವಾಲ್ಮೀಕಿ ನಿಗಮದ ಹಣ ಸೋನಿಯಾ ಮತ್ತು ರಾಹುಲ್ ಗಾಂಧಿಯವರೆಗೂ ಹೋಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸಿ, ನಿನ್ನೆ ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ನಿವಾಸಕ್ಕೆ ಭೇಟಿ ನೀಡಿದ್ದೇನೆ. ಸರ್ಕಾರ ಇನ್ನೂ ಮೀನ ಮೇಷ ಎಣಿಸುತ್ತಿದೆ. ಸಚಿವರ ರಾಜೀನಾಮೆ ಪಡೆಯಲು ಹಿಂದೇಟು ಹಾಕುತ್ತಿದೆ.
187 ಕೋಟಿ ದಲಿತರ ಹಣ ಅವ್ಯವಹಾರವೇ ಒಂದು ವರ್ಷದ ಸಾಧನೆ ಎಂದು ಗೊತ್ತಾಗುತ್ತದೆ ಅಂತಾ ರಾಜೀನಾಮೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಕರ್ನಾಟಕದಲ್ಲಿ ಯಾವುದೇ ಬ್ಯಾಂಕ್ಗಳು ಇರಲಿಲ್ವಾ ಹಣ ವರ್ಗಾವಣೆಗೆ?. ದಲಿತರ ಹಣ ಐಟಿ ಕಂಪನಿಗಳಿಗೆ ಹೇಗೆ ವರ್ಗಾವಣೆ ಆಗುತ್ತದೆ? ಎಂದು ಪ್ರಶ್ನಿಸಿದರು.
ಇಂತಹ ಹಣವನ್ನೇ ಲೂಟಿ ಹೊಡೆಯುವ ಕಾಂಗ್ರೆಸ್ ನವರು ಎಷ್ಟು ಚಾಂಡಾಳರು ಇರಬೇಕು?. ಸಿಎಂ, ಸೂಪರ್ ಸಿಎಂ ಗೊಂದಲದಲ್ಲಿ ಜನ ಬಡವಾಗುತ್ತಿದ್ದಾರೆ. ನಿಷ್ಠಾವಂತ ಅಧಿಕಾರಿಗಳಿಗೆ ಸಾವಿನ ಭಾಗ್ಯ ಕೊಟ್ಟ ಸರ್ಕಾರ ಇದು. ಅಕ್ರಮ ತಡೆದರೆ ಅವರು ನಿವೃತ್ತರಾಗಬೇಕು ಅಥವಾ ನೇಣಿಗೆ ಶರಣಾಗಬೇಕು ಇದು ಸಿದ್ದರಾಮಯ್ಯ ಆಡಳಿತದ ಶೈಲಿ. ಈ ಅವ್ಯವಹಾರಕ್ಕೆ ಕಾಂಗ್ರೆಸ್ ದೆಹಲಿ ನಾಯಕರ ತಲೆದಂಡ ಆಗುತ್ತದೆ. ಕಾಂಗ್ರೆಸ್ ಸರ್ಕಾರ ಬೇನಾಮಿ ಐಟಿ ಕಂಪನಿಗಳಿಗೆ ಟಕಾ ಟಕ್ ಅಂತ ಬೇನಾಮಿ ಹಣ ವರ್ಗಾವಣೆ ಮಾಡಿದೆ ಎಂದು ಟೀಕಿಸಿದರು.
ಕೇಸ್ ಮುಚ್ಚಿ ಹಾಕಲು ಸಿಐಡಿಗೆ ಕೊಟ್ಟಿದ್ದೀರಿ. ಬ್ಯಾಂಕ್ ನವರು ಸಿಬಿಐಗೆ ಪತ್ರ ಬರೆದ ಕೂಡಲೇ ಎಸ್ಐಟಿ ಮಾಡಿದ್ದೀರಿ. ಹಾಗಾದರೆ ನಿಮಗೆ ಸಿಐಡಿ ಮೇಲೆ ನಂಬಿಕೆ ಇಲ್ಲವೇ?. ಹಾಗಾದರೆ ಇಲ್ಲಿಯವರೆಗೆ ಸಿಐಡಿಗೆ ಕೊಟ್ಟ ಕೇಸ್ಗಳ ಕಥೆ ಏನು?. ಸರ್ವರಿಗೂ ಸಮಪಾಲು ಅಂತಾ ಹಣವನ್ನು ಹಂಚಿಕೊಂಡಿಲ್ಲ ಅಂತಾದರೆ ಸಿಬಿಐಗೆ ಕೊಡಿ. ಸಿಎಂ ರಾಜೀನಾಮೆ ಕೊಡಬೇಕು, ಸಿಬಿಐಗೆ ವಹಿಸಬೇಕು. ಈ ಐಟಿ ಕಂಪನಿಗಳು ಎಲ್ಲವೂ ಕಾಂಗ್ರೆಸ್ನ ಹಿಂಬಾಲಕರದ್ದು.
ಕರ್ನಾಟಕದಲ್ಲಿ ಆದರೆ ಗೊತ್ತಾಗುತ್ತದೆ ಅಂತಾ ತೆಲಂಗಾಣದ ಬ್ಯಾಂಕ್ಗಳಿಗೆ ವರ್ಗಾವಣೆ ಮಾಡಲಾಗಿದೆ. ಕಾಂಗ್ರೆಸ್ನ ಮಾಯಾಜಾಲದ ಸ್ವರೂಪ ಜನರ ಮುಂದೆ ಬಂದಿದೆ. ವಾಲ್ಮೀಕಿ ನಿಗಮದ ಅಧ್ಯಕ್ಷರಿಗೆ ಮಾಹಿತಿ ಇಲ್ಲ ಅಂತಾದರೆ ನಿಗಮದ ಪರಿಶೀಲನೆ ಮಾಡುವಾಗ ಕೇಳಬೇಕಿತ್ತಲ್ಲವೇ?. ಭ್ರಷ್ಟಾಚಾರವಾಗಿದೆ ಎಂದು ಸಿಎಂ, ಡಿಸಿಎಂ ಸೇರಿ ಎಲ್ಲರೂ ಹೇಳುತ್ತಿದ್ದಾರೆ, ಆದರೆ ಫಲಿತಾಂಶ ಸೊನ್ನೆ ಎಂದು ವಾಗ್ದಾಳಿ ನಡೆಸಿದರು.
ಸಿಎಂ ಮತ್ತು ಡಿಸಿಎಂ ಕೋರ್ಟ್ಗೆ ಹಾಜರಾಗಿ, ರಾಹುಲ್ ಗಾಂಧಿ ಗೈರು ವಿಚಾರವಾಗಿ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಬಳಿಯೂ ಪ್ರಜ್ವಲ್ ರೇವಣ್ಣ ರೀತಿ ಡಿಪ್ಲೋಮ್ಯಾಟಿಕ್ ಪಾಸ್ ಪೋರ್ಟ್ ಇದೆ. ರಾಹುಲ್ ಗಾಂಧಿ ಫಲಿತಾಂಶ ಬರುವ ಮೊದಲೇ ವಿದೇಶಕ್ಕೆ ಹೋಗುತ್ತಾರೆ. ಎಕ್ಸಿಟ್ ಪೋಲ್ ಬರುವ ಮೊದಲೇ ರಾಹುಲ್ ಗಾಂಧಿ ಎಕ್ಸಿಟ್ ಆಗುತ್ತಾರೆ ಎಂದು ಕಿಡಿ ಕಾರಿದರು.
ಈ ಭ್ರಷ್ಟಾಚಾರದ ಕಪ್ಪುಚುಕ್ಕೆ ಕಾಂಗ್ರೆಸ್ ಸರ್ಕಾರ ಮೇಲೆ ಬಂದಾಗಿದೆ. ಇದನ್ನು ನಿರ್ಮಾ, ಸರ್ಫ್ ಹಾಕಿ ತೊಳೆದರೂ ಹೋಗಲ್ಲ. ಈ ಬಗ್ಗೆ ಕಾನೂನು ಕ್ರಮ ಏನು ಕೈಗೊಳ್ಳಬೇಕೋ ಅದನ್ನು ಚರ್ಚೆ ಮಾಡಿ ಕೈಗೊಳ್ಳುತ್ತೇವೆ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರಿಗೆ ಕೂಡಾ ಪತ್ರದ ಮೂಲಕ ಮಾಹಿತಿ ಕೊಟ್ಟಿದ್ದೇನೆ. ಎಸ್ಐಟಿ ಮಾಡಿದರೆ ಸಿಬಿಐ ಸುಲಭವಾಗಿ ಕೇಸ್ ತೆಗೆದುಕೊಳ್ಳಲು ಆಗಲ್ಲ ಎಂದು ಕಾನೂನು ತಜ್ಞರೊಬ್ಬರು ಸಿಎಂಗೆ ಸಲಹೆ ಕೊಟ್ಟಿದ್ದಾರೆ. ಅದಕ್ಕೆ ಎಸ್ಐಟಿ ತನಿಖೆಗೆ ಸರ್ಕಾರ ಆದೇಶ ಮಾಡಿದೆ ಎಂದು ಆರೋಪಿಸಿದರು.
ಕೇರಳ ಸರ್ಕಾರ ಛೀಮಾರಿ ಹಾಕಿದೆ:ಕೇರಳದಲ್ಲಿ ಶತ್ರು ಭೈರವಿ ಯಾಗದ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಕೇರಳ ಸರ್ಕಾರ ನಿರಾಕರಣೆ ವಿಚಾರವಾಗಿ ಪ್ರತಿಕ್ರಿಯಿಸಿ, ದೇವೇಗೌಡರು ಇದನ್ನು ಮಾಡಿದ್ದಾರೆ ಅಂತಾ ಬಿಂಬಿಸಲು ಡಿ.ಕೆ. ಶಿವಕುಮಾರ್ ಈ ರೀತಿ ಹೇಳಿದ್ದಾರೆ. ಕೇರಳ ಸರ್ಕಾರ ಈಗ ಛೀಮಾರಿ ಹಾಕಿದೆ. ಕೇರಳದ ಛೀಮಾರಿಗೆ ಕಾಂಗ್ರೆಸ್ ನವರು ಒಬ್ಬರೂ ಪ್ರತಿಕ್ರಿಯೆ ಕೊಟ್ಟಿಲ್ಲ. ಇಷ್ಟು ವೈಫಲ್ಯ ಇದ್ಯಾ ಸರ್ಕಾರದ ಗುಪ್ತಚರ ಇಲಾಖೆ. ಸಿಎಂ ಕೇರಳ ಸರ್ಕಾರಕ್ಕೆ ಪತ್ರ ಬರೆಯಲಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ:ವಾಲ್ಮೀಕಿ ನಿಗಮ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಸಿಎಂ ಸ್ಪಷ್ಟನೆ - Valmiki Corporation