ಕರ್ನಾಟಕ

karnataka

ETV Bharat / state

ಪಿಂಚಣಿ, ನರೇಗಾ ಹಣ ಸಾಲ ಮರುಪಾವತಿಗೆ ಹೊಂದಿಸದಂತೆ ಆದೇಶಿಸಿ, ಬ್ಯಾಂಕುಗಳು ಒಪ್ಪದಿದ್ದರೆ ಸಾಲ ಮನ್ನಾ ಮಾಡಿ: ಆರ್​.ಅಶೋಕ್ - R Ashok - R ASHOK

ನರೇಗಾ ಹಣ, ಪಿಂಚಣಿ ರೈತರ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಆರ್​.ಅಶೋಕ್​ ಆಗ್ರಹಿಸಿದ್ದಾರೆ.

ಆರ್​. ಅಶೋಕ್
ಆರ್​. ಅಶೋಕ್ (ETV Bharat)

By ETV Bharat Karnataka Team

Published : May 17, 2024, 12:56 PM IST

ಬೆಂಗಳೂರು:ರೈತ ವಿರೋಧಿ, ಕಣ್ಣು, ಕಿವಿ, ಹೃದಯ ಇಲ್ಲದ ಕಾಂಗ್ರೆಸ್ ಸರ್ಕಾರ ನರೇಗಾ ಹಣ, ಪಿಂಚಣಿ ಹಣವನ್ನೂ ರೈತರ ಸಾಲಕ್ಕೆ ಜಮೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ರೈತರ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಬ್ಯಾಂಕ್​ಗಳಿಗೆ ಸೂಚಿಸಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಿ. ಬ್ಯಾಂಕ್​ಗಳು ಒಪ್ಪದಿದ್ದರೆ ರೈತರ ಸಾಲ ಮನ್ನಾ ಮಾಡಲಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್​ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಶೋಕ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕದ ರೈತರಿಗಾಗಿ 3,454 ಕೋಟಿ ರೂ. ಬರ ಪರಿಹಾರ ಬಿಡುಗಡೆಗೊಳಿಸಿದೆ. ಆದರೆ ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ತನ್ನ ಪಾಲಿನ ಹಣವನ್ನು ನೀಡಿಲ್ಲ. ಕೇಂದ್ರ ಸರ್ಕಾರ ನೀಡಿದ ಹಣವನ್ನು ಕೂಡ ರೈತರಿಗೆ ಸರಿಯಾಗಿ ತಲುಪಿಸಿಲ್ಲ. ಈ ಪರಿಹಾರದ ಹಣವನ್ನು ಹಳೆ ಬಾಕಿಗಳಿಗೆ ಬ್ಯಾಂಕುಗಳು ಜಮೆ ಮಾಡುತ್ತಿದ್ದರೂ ರಾಜ್ಯ ಸರ್ಕಾರ ತಕ್ಷಣದ ಕ್ರಮ ವಹಿಸದೆ ಕೈ ಕಟ್ಟಿ ಕುಳಿತಿತ್ತು. ಈಗ ಪಿಂಚಣಿ, ನರೇಗಾ ಹಣವೂ ರೈತರ ಕೈ ಸೇರುವಂತೆ ನೋಡಿಕೊಳ್ಳಲು ಸರ್ಕಾರ ವಿಫಲವಾಗಿದೆ. ಈ ಮೂಲಕ 'ಅನ್ನದಾತರ ಹೊಟ್ಟೆಗೆ ಹೊಡೆಯುವ' ಪಾಪದ ಕೆಲಸ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕೂಡಲೇ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ರೈತರ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚನೆ ನೀಡಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಬೇಕು‌. ಬ್ಯಾಂಕ್​ಗಳು ಒಪ್ಪದಿದ್ದರೆ ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರ ಪ್ರವಾಹ ವಿಕೋಪದಿಂದ ಹಾನಿಗೊಳಗಾದವರಿಗೆ ದುಪ್ಪಟ್ಟು ಪರಿಹಾರ ನೀಡಿತ್ತು. ಕೇಂದ್ರ ಸರ್ಕಾರದ ಜೊತೆಗೆ ರಾಜ್ಯದ ಪಾಲನ್ನೂ ನೀಡಲಾಗಿತ್ತು. ಈಗ ಪಾಪರ್​ ಆಗಿ ಖಾಲಿ ಖಜಾನೆಯಲ್ಲಿ ಚಿಲ್ಲರೆ ಎಷ್ಟು ಉಳಿದಿದೆ ಎಂದು ಎಣಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಸಂಕಷ್ಟಕ್ಕೂ ಮಿಡಿಯದೆ ಸುಮ್ಮನಿದ್ದಾರೆಎಂದು ಟೀಕಿಸಿದ್ದಾರೆ.

ಸಹಾಯಧನ ಘೋಷಿಸಿ:ಕಳೆದ ವರ್ಷ ಹಿಂಗಾರು, ಮುಂಗಾರು ಎರಡೂ ಕೈ ಕೊಟ್ಟಿದ್ದರಿಂದ ಈ ವರ್ಷ ರೈತರ ಬಳಿ ಬಿತ್ತನೆ ಬೀಜ, ರಸಗೊಬ್ಬರ ಕೊಳ್ಳಲು, ಉಳುಮೆ ಮಾಡಲೂ ಸಹ ಹಣವಿಲ್ಲದ ಪರಿಸ್ಥಿತಿ ಇದೆ. ಆದ್ದರಿಂದ ಈ ಕೂಡಲೇ ಎಕರೆಗೆ 5,000 ರೂ. ನಂತೆ ರೈತರಿಗೆ ವಿಶೇಷ ಸಹಾಯಧನ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಈ ಬಾರಿಯೂ ಕೃಷಿ ಬೆಳೆಗಳು ಕೈ ಕೊಟ್ಟು ಆಹಾರ ಪದಾರ್ಥಗಳ ಕೊರತೆಯಿಂದ ಹಣದುಬ್ಬರ ಉಂಟಾಗಿ ತೀವ್ರ ಬೆಲೆ ಏರಿಕೆ ಆಗುವುದು ನಿಶ್ಚಿತ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ರೈತರ ಸಮಸ್ಯೆಗಳಿಗೆ ಸ್ಪಂದಿಸಿ ನಾಡಿನ ಕೃಷಿ ಚಟುವಟಿಕೆಯನ್ನು ಉಳಿಸಬೇಕು ಎಂದು ಆರ್.ಅಶೋಕ್​ ಆಗ್ರಹಿಸಿದ್ದಾರೆ.

ಇದನ್ನೂ ಓದಿ:'ಕೇಂದ್ರದಿಂದ ಹಣ ಬಂದರೆ ಇನ್ನುಳಿದ ರೈತರಿಗೆ ಪರಿಹಾರ ಬಿಡುಗಡೆ': ಸತೀಶ್ ಜಾರಕಿಹೊಳಿ - Satish Jarkiholi

ABOUT THE AUTHOR

...view details