ಮಂಡ್ಯ:ಕೆರಗೋಡಿನ ಘಟನೆಗೆ ಶಾಸಕ ರವಿಕುಮಾರ್ ಗಣಿಗ ಕಾರಣವೆಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು. ಮಂಡ್ಯದಲ್ಲಿ ಗುರುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪಕ್ಷಾತೀತವಾಗಿ ಧ್ವಜಸ್ತಂಭವನ್ನು ಕೆರಗೋಡಿನಲ್ಲಿ ಸ್ಥಾಪಿಸಬೇಕೆಂದು ಶಾಸಕರೇ ಸ್ಥಳ ಪರಿಶೀಲನೆ ಮಾಡಿದ್ದರು. ಅಲ್ಲದೇ ಊರಿನ ಎಲ್ಲರನ್ನೂ ಒಟ್ಟು ಸೇರಿಸಿ ಜನವರಿ 22ರಂದು ನಾನೇ ಉದ್ಘಾಟನೆ ಮಾಡುತ್ತೇನೆ ಎಂದು ವಾಗ್ದಾನ ಕೊಟ್ಟಿದ್ದರು ಎಂದರು.
ಜನವರಿ 22ರಂದು ಮಾರಗೌಡನಹಳ್ಳಿಯಲ್ಲಿ ತಿರುಪತಿ ದೇವಾಲಯ ಉದ್ಘಾಟನೆಯ ಪ್ರಯುಕ್ತ ಕುಮಾರಸ್ವಾಮಿಯವರು ಬರಬೇಕಿತ್ತು. ಅಯೋಧ್ಯೆಗೆ ತೆರಳಬೇಕಿದ್ದ ಕಾರಣ ಅವರು ಬರಲು ಸಾಧ್ಯವಾಗಲಿಲ್ಲ. ನೀವೇ ಮುಖಂಡರು ನೆರವೇರಿಸಿ ಎಂದು ಸೂಚನೆ ನೀಡಿದ್ದರು. ಅದರಂತೆ ನಾವೆಲ್ಲಾ ಮಾರಗೌಡನಹಳ್ಳಿಗೆ ತೆರಳುತ್ತಿದ್ದಾಗ ಕರೆಗೋಡಿನ ಜನರು ಅಡ್ಡಬಂದು ಹನುಮಧ್ವಜ ಉದ್ಘಾಟನೆಯಾಗಿದೆ, ನೀವು ಬಂದು ಪೂಜೆ ಸಲ್ಲಿಸಿ ಎಂದರು. ಹೀಗಾಗಿ ನಾವು ಅಲ್ಲಿಗೆ ತೆರಳಿ ಪೂಜೆ ಸಲ್ಲಿಸಿ ತಿರುಪತಿ ದೇವಾಲಯಕ್ಕೆ ತೆರಳಿದ್ದೆವು.