ಬೆಳಗಾವಿ: ಹುಬ್ಬಳ್ಳಿ ಕಾಲೇಜು ಕ್ಯಾಂಪಸ್‌ನಲ್ಲಿ ನಿನ್ನೆ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಆರೋಪಿಯ ಹುಟ್ಟೂರು ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣ ಬಂದ್ ಮಾಡಿ ಇಂದು ಸಾರ್ವಜನಿಕರು ಬೃಹತ್ ಪ್ರತಿಭಟನೆ ನಡೆಸಿದರು. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು.
ಮುನವಳ್ಳಿಯ ಪಂಚಲಿಂಗೇಶ್ವರ ದೇವಸ್ಥಾನ ಕ್ರಾಸ್ ಬಳಿ ಯರಗಟ್ಟಿ-ಸವದತ್ತಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಅಮಾನವೀಯವಾಗಿ ಯುವತಿ ಹತ್ಯೆಗೈದ ಆರೋಪಿ ಫಯಾಜ್ಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ಬಂದ್ಗೆ ಎಲ್ಲ ಸಮುದಾಯದವರೂ ಬೆಂಬಲ ನೀಡಿದರು. ಪಟ್ಟಣದ ಎಲ್ಲ ಅಂಗಡಿ-ಮುಂಗಟ್ಟುಗಳನ್ನು ಸ್ವಯಂ ಪ್ರೇರಣೆಯಿಂದ ವ್ಯಾಪಾರಿಗಳು ಮುಚ್ಚಿದರು. ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮೂರು ಕೆಎಸ್ಆರ್‌ಪಿ, ಒಂದು ಡಿಆರ್ ತುಕಡಿ ಸೇರಿ ನೂರಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಅಲ್ಲದೇ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ನೇತೃತ್ವದಲ್ಲಿ ಬಿಜೆಪಿ ನಾಯಕರು ಮುನವಳ್ಳಿಯಲ್ಲಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಈರಣ್ಣ ಕಡಾಡಿ, "ಇದು ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂಥ ಘಟನೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಮತ ಬ್ಯಾಂಕ್ಗೋಸ್ಕರ ತುಷ್ಠೀಕರಣ ನೀತಿಯಿಂದಾಗಿ ಇಂಥ ಪರಿಸ್ಥಿತಿ ನಿರ್ಮಾಣವಾಗಿದೆ. ರಾಮೇಶ್ವರಂ ಕೆಫೆ ಮತ್ತು ಮಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳನ್ನು ಕೇವಲ ಬಂಧಿಸಿದರೆ ಸಾಲದು. ಯುಪಿ ಮಾದರಿಯಲ್ಲಿ ಕಠಿಣ ಶಿಕ್ಷೆ ವಿಧಿಸಬೇಕು" ಎಂದರು. ಮುಂಜಾಗೃತಾ ಕ್ರಮವಾಗಿ ಮುನವಳ್ಳಿಯ ಸಾಯಿನಗರದಲ್ಲಿರುವ ಆರೋಪಿಯ ಮನೆಗೆ ಭದ್ರತೆ ಒದಗಿಸಲಾಗಿದೆ.
ಇದನ್ನೂ ಓದಿ:ಹುಬ್ಬಳ್ಳಿ ಕಾಲೇಜು ಕ್ಯಾಂಪಸ್‌ನಲ್ಲಿ ಯುವತಿಯ ಕೊಲೆ: ಪೊಲೀಸ್ ಕಮೀಷನರ್ ಹೇಳಿದ್ದೇನು? - College Girl Murder