ಬೆಳಗಾವಿ:'ಪ್ರಚಾರಕ್ಕಾಗಿ ನೀಚತನದ, ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ' ಎಂದು ತಮ್ಮ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಮಾಜಿ ಶಾಸಕ ಸಂಜಯ್ ಪಾಟೀಲ್ ವಿರುದ್ಧ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿಕಾರಿದ್ದಾರೆ. ಜೊತೆಗೆ ಹೇಳಿಕೆ ಖಂಡಿಸಿ ಶನಿವಾರ ರಾತ್ರಿ ಸಂಜಯ್ ಪಾಟೀಲ್ ನಿವಾಸದ ಎದುರು ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ.
ಮಾಜಿ ಶಾಸಕ ಸಂಜಯ್ ಪಾಟೀಲ್ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಂಬೇವಾಡಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತಾ, 'ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಸೇರಿದ್ದೀರಿ. ಅದರಿಂದ ಅವರಿಗೆ ಇಂದು ನಿದ್ದೆ ಬರುದಿಲ್ಲ. ಹೀಗಾಗಿ ಇಂದು ರಾತ್ರಿ ಮಾತ್ರೆ ಜತೆಗೆ ಒಂದು ಎಕ್ಸ್ಟ್ರಾ ಪೆಗ್ ಹೊಡಿಬೇಕು' ಎಂದಿದ್ದರು.
ಇದೀಗ ಈ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ "ಕರ್ನಾಟಕ ರಾಜ್ಯದ ಮಹಿಳೆಯರು, ಮಕ್ಕಳನ್ನು ನಿಭಾಯಿಸುವ ಸಚಿವೆಗೆ ಈ ರೀತಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ಬಿಜೆಪಿಯವರಿಗೆ ಮಹಿಳೆಯರು ಮತ್ತು ಮಹಿಳಾ ಕುಲದ ಬಗ್ಗೆ ಗೌರವ ಎಷ್ಟಿದೆ ಎನ್ನುವುದು ತೋರಿಸುತ್ತದೆ. ಬಿಜೆಪಿಯವರ ಅಝೆಂಡಾ ಏನು ಎನ್ನುವುದು ಈ ಮೂಲಕ ಗೊತ್ತಾಗುತ್ತದೆ. ಬರೀ ಮಾತಲ್ಲಿ ರಾಮ ಅಂತಾರೆ, ಬೇಟಿ ಬಚಾಬ್ ಬೇಟಿ ಫಡಾವೋ ಎನ್ನುತ್ತಾರೆ. ಪ್ರತಿಯೊಬ್ಬ ಮಹಿಳೆಗೆ ಗೌರವ ನೀಡುವುದು ಹಿಂದೂ ಸಂಸ್ಕೃತಿ. ಸಂಜಯ್ ಪಾಟೀಲ್ ಅವರ ಈ ಹೇಳಿಕೆ ಲಕ್ಷ್ಮಿ ಹೆಬ್ಬಾಳ್ಕರ್ ಅಷ್ಟೇ ಅಲ್ಲ, ಇಡೀ ರಾಜ್ಯದ ಹಾಗೂ ದೇಶದ ಹೆಣ್ಣು ಮಕ್ಕಳಿಗೆ ಮಾಡಿದ ಅವಮಾನ. ನಾನು ರಾಜ್ಯದ ಮಹಿಳೆಯರಿಗೆ ಕರೆ ನೀಡುತ್ತೇನೆ. ಇಂತಹ ಹಿಡನ್ ಅಝೆಂಡಾ ಇಟ್ಟುಕೊಂಡಿರುವ ಬಿಜೆಪಿಗೆ ದಿಕ್ಕಾರ ಕೂಗಬೇಕು. ಸಂಜಯ್ ಪಾಟೀಲ್ ಹೇಳಿಕೆಗೆ ವೇದಿಕೆ ಮೇಲಿದ್ದ ಮಾಜಿ ಸಿಎಂ ಜಗದೀಶ ಶೆಟ್ಟರ್ ಹಾಗೂ ಮಂಗಳಾ ಅಂಗಡಿ ನಕ್ಕರು. ಇದು ಬಿಜೆಪಿಯ ಹಿಡನ್ ಅಝೆಂಡಾ ತೋರಿಸುತ್ತದೆ. ಆಗಲೇ ಆ ಹೇಳಿಕೆಯನ್ನು ವೇದಿಕೆ ಮೇಲೆ ಇದ್ದವರು ಖಂಡಿಸಬೇಕಿತ್ತು. ಖಂಡಿಸಿದ್ದರೆ ಬಿಜೆಪಿಯವರು ಹೆಣ್ಣಿಗೆ ಗೌರವ ಕೊಡುತ್ತಾರೆ ಎಂದಾಗುತ್ತಿತ್ತು. ಇದರಿಂದ ಬಿಜೆಪಿಯವರ ಮುಖವಾಡ ಕಳಚಿದೆ "ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.