ಮಂಡ್ಯ:ವಿಧಾನಸೌಧವನ್ನು ಪ್ರಜಾಪ್ರಭುತ್ವದ ದೇವಾಲಯ ಎನ್ನುತ್ತೇವೆ. ಅಂತಹ ಜಾಗದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದರೆ ಅದು ತಪ್ಪು ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು. ದೇಶ ಮೊದಲು, ರಾಜಕೀಯ ಆಮೇಲೆ. ನಮ್ಮ ದೇಶ ಮೊದಲು ಎನ್ನುವುದನ್ನು ಪ್ರತಿಯೊಬ್ಬರೂ ಅರಿತು ಪಾಲಿಸಬೇಕು. ಪಾಕ್ ಪರ ಘೋಷಣೆ ಕೂಗಿರುವ ಆರೋಪಿಯನ್ನು ಪತ್ತೆ ಹಚ್ಚಿ ತನಿಖೆಗೊಳಪಡಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಜಾತಿ ಗಣತಿ ವರದಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಒಂದಿಷ್ಟು ಗೊಂದಲಗಳಿವೆ. ಕೆಲವರು ನಾವು ಒಪ್ಪಲ್ಲ ಅಂತಿದ್ದಾರೆ, ವರದಿ ಬಂದ ಮೇಲೆ ನೋಡಬೇಕು. ಲೋಪದೋಷಗಳಿವೆಯೇ ಅನ್ನೋದು ಗೊತ್ತಾಗುತ್ತದೆ ಎಂದರು.
ಬೆಂಗಳೂರಿನಲ್ಲಿ ನಡೆಸಿರುವ ಸಭೆಯ ಕುರಿತು ಪ್ರತಿಕ್ರಿಯಿಸಿ, ನನ್ನ ನಿರ್ಧಾರದ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೇನೆ. ಇನ್ನು ಪಕ್ಷ ತೀರ್ಮಾನ ಮಾಡಬೇಕು. ಬೆಂಬಲಿಗರಿಗೆ ಧೈರ್ಯ ತುಂಬುವ ಕೆಲಸವಾಗಿದೆ. ಬಿಜೆಪಿಗೆ ಬನ್ನಿ ಅಂತ ಕರೆದಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿ ತಾಲೂಕಿಗೆ ತೆರಳಿ ಸಭೆ ಮಾಡಿ ಮಾತನಾಡುವೆ. ಹಿಂದೆ ಸ್ವತಂತ್ರ ಅಭ್ಯರ್ಥಿಯಾಗಿದ್ದೆ. ಈಗಿನ ಪರಿಸ್ಥಿತಿ ಬೇರೆ. ನಿರ್ಮಲಾನಂದ ಸ್ವಾಮೀಜಿ ಅವರ ಆಶೀರ್ವಾದ ಪಡೆದು ಪ್ರಚಾರ ಕಾರ್ಯ ಆರಂಭಿಸುತ್ತೇನೆ ಎಂದು ಹೇಳಿದರು.