ಕಲಬುರಗಿ: ಕೇಂದ್ರದ ಬಿಜೆಪಿ ಸರ್ಕಾರ 10 ವರ್ಷಗಳ ಸಾಧನೆಗಳ ಮೇಲೆ ಲೋಕಸಭಾ ಚುನಾವಣೆ ಎದುರಿಸಲಿ. ಯಾರು ಎಷ್ಟು ಸಾಧನೆ ಮಾಡಿದ್ದಾರೆಂದು ಜನ ತೀರ್ಮಾನಿಸುತ್ತಾರೆ. ಅವರ ಬಳಿ ಯಾವುದೇ ಸಾಧನೆಗಳಿಲ್ಲ. ಹಾಗಾಗಿ ವೈಯಕ್ತಿಕ ಟೀಕೆ ಮಾಡುತ್ತಾರೆ. ಮೋದಿ ಗ್ಯಾರಂಟಿ ಕೇವಲ ಟಿವಿಯಲ್ಲಿದೆ. ಆದರೆ ನಮ್ಮ ಗ್ಯಾರಂಟಿ ಜನರ ಕೈಯಲ್ಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸೋಲಿನ ಭೀತಿಯಿಂದ ಸ್ಪರ್ಧಿಸಲಿಲ್ಲ ಎಂಬ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅಶೋಕ್ ಅವರಿಗೆ ಸಾಮಾನ್ಯ ಜ್ಞಾನ ಇಲ್ಲ ಅನಿಸುತ್ತದೆ. ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ 50 ವರ್ಷ ಎಲೆಕ್ಟೆಡ್ ಪಾಲಿಟಿಕ್ಸ್ ಮಾಡಿದವರು. ಅವರ ಶ್ರಮ, ಕೊಡುಗೆ ಅಪಾರ. ನಮ್ಮ ಪಕ್ಷ, ಮೈತ್ರಿ ಕೂಟವನ್ನು ಮುನ್ನಡೆಸುವ ದೊಡ್ಡ ಜವಾಬ್ದಾರಿ ಅವರ ಮೇಲಿದೆ. ಕಳೆದ ಬಾರಿಯೂ ಅವರಿಗೆ ಚುನಾವಣೆಯಲ್ಲಿ ಆಸಕ್ತಿ ಇರಲಿಲ್ಲ. ಅಂದು ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಒತ್ತಡಕ್ಕೆ ಮಣಿದು ಚುನಾವಣೆಗೆ ನಿಂತಿದ್ದರು ಎಂದು ತಿಳಿಸಿದರು.
ಬಿಜೆಪಿಯನ್ನು ಹೇಳಿ ಕೇಳಿ ಚುನಾವಣೆಗೆ ನಿಲ್ಲುವ ಅಗತ್ಯ ನಮಗಿಲ್ಲ. ಮೊದಲು ನಿಮ್ಮ ಪಕ್ಷದಲ್ಲಿ ಏನಾಗುತ್ತಿದೆ ಎಂಬುದರ ಕಡೆಗೆ ಗಮನ ಕೊಡಿ. ನಿಮ್ಮ ಪಕ್ಷ ಒಂದು ಕುಟುಂಬದ ಹಿಡಿತದಲ್ಲಿದೆ. ಶುದ್ಧೀಕರಣದ ಅಗತ್ಯವಿದೆ ಎಂದು ಈಶ್ವರಪ್ಪ, ಸದಾನಂದ ಗೌಡ ಹೇಳುತ್ತಿದ್ದಾರೆ. ಯತ್ನಾಳ್, ಸಿ.ಟಿ.ರವಿ, ಪ್ರತಾಪ್ ಸಿಂಹ ಅವರು ಹಿಂದುತ್ವದ ಪರ ಹೋರಾಟ ಮಾಡಿದವರಿಗೆ ನಮ್ಮ ಪಕ್ಷದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ ಅಂತಿದ್ದಾರೆ. ಇವರೊಂದಿಗೆ ಮೈತ್ರಿ ಮಾಡಿಕೊಂಡು ಜೆಡಿಎಸ್ನವರು ಕೂತಿದಾರೆ. ನಿಮ್ಮ ಸಂಸಾರದಲ್ಲಿ ಬಿರುಕು ಮೂಡಿದೆ. ಮೊದಲು ಆ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ. ನಿಮ್ಮ ಸಂಸಾರ ಕಟ್ಟುವ ಕೆಲಸ ಮೊದಲು ಮಾಡಿ ಎಂದು ತಿರುಗೇಟು ನೀಡಿದರು.