ಮಂಗಳೂರು:ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ಮಂಗಳೂರಿನಲ್ಲಿ ಬಿಜೆಪಿ ಪರ ರೋಡ್ ಶೋ ನಡೆಸಿದ್ದು, ಈ ಬಗ್ಗೆ ಎಕ್ಸ್ ಪೋಸ್ಟ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
"ಮಂಗಳೂರಿನಲ್ಲಿ ನಡೆದ ರೋಡ್ ಶೋನಲ್ಲಿ ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಿದ ಮಂಗಳೂರು ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಜನತೆಗೆ ನನ್ನ ಕೃತಜ್ಞತೆಗಳು. ಕರ್ನಾಟಕದ ಈ ಭಾಗ ಹಾಗೂ ನಮ್ಮ ಪಕ್ಷದ ನಡುವೆ ಬಲಿಷ್ಠ ಬಾಂಧವ್ಯವಿದೆ. ಉತ್ತಮ ಆಡಳಿತದ ನಮ್ಮ ಸಿದ್ಧಾಂತ ಮತ್ತು ನಮ್ಮ ಪ್ರಾಚೀನ ಸಂಸ್ಕೃತಿಯನ್ನು ಸಂರಕ್ಷಿಸುವ ಹಾಗೂ ಆಚರಿಸುವ ನಮ್ಮ ಪ್ರಯತ್ನಗಳಿಗೆ ಜನತೆ ನಮ್ಮನ್ನು ವರ್ಷಗಳಿಂದ ಆಶೀರ್ವದಿಸಿದ್ದಾರೆ. ನಾವು ಇಂದು ಬಿಡುಗಡೆ ಮಾಡಿದ ಸಂಕಲ್ಪ ಪತ್ರದಲ್ಲಿ ಮಂಗಳೂರು ಅಭಿವೃದ್ಧಿಗಾಗಿ ಸಾಕಷ್ಟು ಕುತೂಹಲಕಾರಿ ಅಂಶಗಳಿವೆ".
"ವಿಶೇಷವಾಗಿ ನಗರಾಭಿವೃದ್ಧಿ ಮೂಲಕ “ಸುಗಮ ಜೀವನ” ಕಲ್ಪಿಸುವುದು ಮತ್ತು ಇತರೆ ಕೆಲಸಗಳನ್ನು ಮಾಡುತ್ತೇವೆ. ಮೀನುಗಾರಿಕೆಯಂತಹ ಕ್ಷೇತ್ರಗಳಲ್ಲಿ ನಿರೂಪಿಸಲಾದ ದೃಷ್ಟಿಕೋನ ಕರಾವಳಿ ಆರ್ಥಿಕತೆಯನ್ನು ಪರಿವರ್ತಿಸುತ್ತದೆ. ಮತಬ್ಯಾಂಕ್ ರಾಜಕಾರಣದಲ್ಲಿ ಮುಳುಗಿ ಜನರನ್ನು ವಿಭಜಿಸುವ ಕಾಂಗ್ರೆಸ್ಗೆ ಮತ ಹಾಕಲು ದಕ್ಷಿಣ ಕನ್ನಡಕ್ಕೆ ಸಾಧ್ಯವಿಲ್ಲ. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಗುಂಪುಗಾರಿಕೆಯಲ್ಲಿ ನಿರತವಾಗಿದ್ದು, ಸಾರ್ವಜನಿಕರ ಹಣವನ್ನು ಲೂಟಿ ಮಾಡಿ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಿದೆ. ಅವರಿಗೆ ಕರ್ನಾಟಕದ ಸಂಸ್ಕೃತಿಯ ಬಗ್ಗೆ ತಿಳುವಳಿಕೆ ಇಲ್ಲ".