ಮೈಸೂರು:ರಾಜ್ಯದಲ್ಲಿ ಲೋಕಸಭೆ ಚುನಾವಣಾ ಕಣ ರಂಗೇರಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮೈಸೂರು, ಮಂಗಳೂರಲ್ಲಿ ಮತಯಾಚನೆ ಮಾಡಲಿದ್ದಾರೆ. ಇಂದು ಸಂಜೆ 4 ಗಂಟೆಗೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಬಿಜೆಪಿಯ ವಿಜಯಸಂಕಲ್ಪ ಬೃಹತ್ ಸಮಾವೇಶದಲ್ಲಿ ಮೋದಿ ಭಾಗಿಯಾಗಲಿದ್ದಾರೆ.
ಈ ಕುರಿತು ಮಹಾರಾಜ ಕಾಲೇಜು ಮೈದಾನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಟಿ.ಎಸ್. ಶ್ರೀವತ್ಸ, ಭಾನುವಾರ ನಡೆಯಲಿರುವ ಬಿಜೆಪಿ ಸಮಾವೇಶಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ವೇದಿಕೆ ಮುಂಭಾಗ 60 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಭಾಗಿಯಾಗಲಿದ್ದಾರೆ ಎಂದರು.
ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಭಾಗಗಳಿಂದ ಬಿಜೆಪಿ -ಜೆಡಿಎಸ್ ಕಾರ್ಯಕರ್ತರು ಆಗಮಿಸುತ್ತಾರೆ. ಈ ವೇಳೆ ನಾಲ್ಕು ಕ್ಷೇತ್ರದ ಮೈತ್ರಿ ಅಭ್ಯರ್ಥಿಗಳು ಇರುತ್ತಾರೆ. ಬಿಜೆಪಿ, ಜೆಡಿಎಸ್ ಮೈತ್ರಿ ಸಮಾವೇಶ ಇದಾಗಲಿದೆ. ಕಾರ್ಯಕರ್ತರನ್ನ ಉದ್ದೇಶಿಸಿ ಮೋದಿಯವರು ಮಾತನಾಡಲಿದ್ದಾರೆ. ಪ್ರತಿ ವಾರ್ಡ್‌ನಿಂದ 300 ಮಂದಿಯನ್ನು ಕರೆ ತರುವ ಕೆಲಸ ಮಾಡುತ್ತೇವೆ. ಈಗಾಗಲೇ ಮನೆ ಮನೆಗೂ ಕರಪತ್ರ ನೀಡಿ ಆಹ್ವಾನಿಸಿದ್ದೇವೆ. ಈ ಮೂಲಕ ನಾಲ್ಕು ಹಂತದಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದೇವೆ ಎಂದು ತಿಳಿಸಿದರು.
ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಮಂಡ್ಯ ಜಿಲ್ಲೆಯಿಂದ 20 ಸಾವಿರ, ಹಾಸನದಿಂದ 15 ಸಾವಿರ, 65 ವಾರ್ಡಿನಿಂದ ಒಟ್ಟು ಸೇರಿ 25,000, ಚಾಮರಾಜನಗರದಿಂದ 25 ಸಾವಿರ ಮಂದಿಯನ್ನು ಕರೆತರುವ ಪ್ರಯತ್ನ ನಡೆಸುತ್ತೇವೆ. 15ಕ್ಕೂ ಹೆಚ್ಚು ಮಂದಿ ಎನ್ಆರ್ಐಗಳು ಸಹ ಇರಲಿದ್ದಾರೆ. ಸಮಾವೇಶ ಇಂದು ಸಂಜೆ 4 ಗಂಟೆಗೆ ಆರಂಭವಾಗಿ 5.5ಕ್ಕೆ ಮುಕ್ತಾಯಗೊಳ್ಳಲಿದೆ. ಮೈಸೂರಿನಲ್ಲಿ ಯಾವುದೇ ರೋಡ್ ಶೋ ಇರುವುದಿಲ್ಲ. ಪ್ರಧಾನಿ ಮೋದಿ ಭಾಷಣ ಮುಗಿಸಿದ ಬಳಿಕ ಹೆಲಿಕಾಪ್ಟರ್ ಮೂಲಕ ಮಂಗಳೂರಿಗೆ ತೆರಳಲಿದ್ದಾರೆ ಎಂದು ಮಾಹಿತಿ ನೀಡಿದರು.