ಕರ್ನಾಟಕ

karnataka

ETV Bharat / state

ನದಿ ನಿಯಂತ್ರಣಾ ವಲಯ ಗುರುತಿಸಿ, ವಾಣಿಜ್ಯ ಚಟುವಟಿಕೆ ನಿಯಂತ್ರಿಸಲು ಪರಿಸರವಾದಿಗಳಿಂದ ನಿರ್ಣಯ ಮಂಡನೆ - Gadgil Report - GADGIL REPORT

ಬೆಂಗಳೂರಿನ ಗಾಂಧಿ ಭವನದಲ್ಲಿ ಶನಿವಾರ ನಡೆದ ಸಂವಾದದಲ್ಲಿ ಪರಿಸರವಾದಿಗಳು ಹಲವು ನಿರ್ಣಯಗಳನ್ನು ಕೈಗೊಂಡರು.

Presentation of several resolutions by environmentalists
ಸಂವಾದದಲ್ಲಿ ಪಾಲ್ಗೊಂಡಿದ್ದ ಪರಿಸರವಾದಿಗಳು (ETV Bharat)

By ETV Bharat Karnataka Team

Published : Aug 10, 2024, 4:15 PM IST

ಬೆಂಗಳೂರು: ಸಮುದ್ರದಂಚಿಗೆ ಕರಾವಳಿ ನಿಯಂತ್ರಿತ ವಲಯ(ಸಿಆರ್‌ಝಡ್) ನಿಯಮಗಳ ಮಾದರಿಯಲ್ಲಿ ಪಶ್ಚಿಮಘಟ್ಟಗಳ ಪ್ರಾಂತದಲ್ಲಿ ಹರಿಯುವ ಎಲ್ಲ ನದಿಗಳಿಗೂ ನದಿ ನಿಯಂತ್ರಣಾ ವಲಯವನ್ನು (ಆರ್‌ಆರ್‌ಝಡ್) ಗುರುತಿಸುವುದರ ಜೊತೆಗೆ ನಡೆಯುತ್ತಿರುವ ಪರಿಸರ ವಿರೋಧಿ ವಾಣಿಜ್ಯ ಚಟುವಟಿಕೆಗಳನ್ನು ಸಹ ನಿಯಂತ್ರಿಸಬೇಕು ಎಂಬುದು ಸೇರಿದಂತೆ ಪರಿಸರವಾದಿಗಳು ಹಲವು ನಿರ್ಣಯಗಳನ್ನು ಕೈಗೊಂಡರು.

ನಗರದ ಗಾಂಧಿ ಭವನದಲ್ಲಿ ಇಂದು ನಡೆದ 'ಪರಿಸರಕ್ಕಾಗಿ ನಾವು ಸಂಘಟನೆ ಹಮ್ಮಿಕೊಂಡಿದ್ದ ಗಾಡ್ಗೀಳ್​ ವರದಿ ಜಾರಿ ಮಾಡಲು ಇನ್ನೂ ಎಷ್ಟೆಷ್ಟು ಬಲಿ ಬೇಕು?' ಎಂಬ ಹಕ್ಕೊತ್ತಾಯ ಸಂವಾದದಲ್ಲಿ ಈ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಅಷ್ಟೇ ಅಲ್ಲದೆ, ಅರಣ್ಯ ಪ್ರದೇಶಗಳಲ್ಲಿ ಹೊರರಾಜ್ಯಗಳ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದನ್ನು ನಿಯಂತ್ರಣಕ್ಕೆ ತರಬೇಕು. ಈಶಾನ್ಯ ರಾಜ್ಯಗಳಂತೆ ಇನ್ನರ್ ಲೈನ್ ಪರ್ಮಿಟ್ ಮಾದರಿಯನ್ನು ಪಶ್ಚಿಮಘಟ್ಟಗಳಲ್ಲೂ ಜಾರಿಗೆ ತರಬೇಕು, ಮರಗಳನ್ನು ಉಳಿಸಿ, ಬೆಳೆಸಲು ಕೇಂದ್ರ ಸರ್ಕಾರ ಪಂಜಾಬ್‌ ರಾಜ್ಯದಲ್ಲಿ ಜಾರಿಗೆ ತಂದಿರುವ ಕಾರ್ಬನ್ ಕ್ರೆಡಿಟ್ ಮಾದರಿಯನ್ನು ಕರ್ನಾಟಕ ರಾಜ್ಯದಲ್ಲೂ ತರಬೇಕು. ಮರಗಳನ್ನು ಕಡಿಯದೇ ಉಳಿಸಿಕೊಂಡ ಭೂ ಮಾಲೀಕರಿಗೆ ಸರ್ಕಾರ ಪ್ರೋತ್ಸಾಹ ಧನ ನೀಡಬೇಕು, ಈ ಯೋಜನೆಯನ್ನು ಮೊದಲಿಗೆ ಪಶ್ಚಿಮ ಘಟ್ಟಗಳಲ್ಲಿ ಜಾರಿ ಮಾಡಿ ಬಳಿಕ ಇತರೆ ಪ್ರದೇಶಗಳಿಗೆ ವಿಸ್ತರಿಸಬೇಕು ಎಂಬ ಹಕ್ಕೊತ್ತಾಯ ಮಂಡಿಸಲಾಯಿತು.

ಅಲ್ಲದೆ ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ ಗುಡ್ಡಗಾಡು ಪ್ರದೇಶಗಳಲ್ಲಿ ಶೇ. 66ರಷ್ಟು ಅರಣ್ಯ ಪ್ರದೇಶಗಳಿರಬೇಕು ಎಂದು ತಿಳಿಸಲಾಗಿದೆ. ಆದರೆ, ರಾಜ್ಯದಲ್ಲಿ ಪ್ರಸ್ತುತ ನೆಡುತೋಪುಗಳನ್ನೂ ಸೇರಿ ಶೇ. 21 ರಷ್ಟು ಮಾತ್ರ ಇದೆ. ಅದರ ಪ್ರಮಾಣ ಶೇ.33 ಹೆಚ್ಚಳವಾಗುವವರೆಗೂ ಯಾವುದೇ ಕಾರಣಕ್ಕೂ ಅರಣ್ಯ ಪ್ರದೇಶವನ್ನು ಅರಣ್ಯೇತರ ಉದ್ದೇಶಗಳಿಗೆ ಬಳಸಬಾರದು, ಪಶ್ಚಿಮಘಟ್ಟ ಪ್ರದೇಶಗಳಲ್ಲಿರುವ ವಿದ್ಯುತ್ ಚಾಲಿತ ಶವಾಗಾರಗಳನ್ನು ಪ್ರಾರಂಭಿಸಿರಬೇಕು. ಇನ್ನು 10 ವರ್ಷಗಳಲ್ಲಿ ಜೈವಿಕ ಅನಿಲ ಮತ್ತು ಅಥವಾ ಸೌರವಿದ್ಯುತ್ತಿನಂಥ ಬದಲಿ ಶಕ್ತಿಯಿಂದ ಚಾಲನೆ ಪಡೆಯುವಂತಾಗಬೇಕು, ಇದಕ್ಕಾಗಿ ವಿಜ್ಞಾನ ತಂತ್ರಜ್ಞಾನ ಸಂಬಂಧಿ ಸಂಶೋಧನೆಗಳಿಗೆ ಸರ್ಕಾರ ತಕ್ಷಣ ಚಾಲನೆ ನೀಡಬೇಕು ಎಂಬ ಹಲವು ನಿರ್ಣಯಗಳನ್ನು ಪರಿಸರವಾದಿಗಳು ಇಂದಿನ ಸಂವಾದಲ್ಲಿ ಕೈಗೊಂಡರು. ಇತರೆ ನಿರ್ಣಯಗಳು ಹೀಗಿವೆ.

  • ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಬರುವ ನಗರ, ಪಟ್ಟಣಗಳಲ್ಲಿ ಮಳೆ ನೀರನ್ನು ಇಂಗಿಸುವ ವ್ಯಾಪಕ ವ್ಯವಸ್ಥೆ ಜಾರಿಗೆ ಬರಬೇಕು.
  • ಕೊಳವೆ ಬಾವಿಗಳ ಅಗತ್ಯವೇ ಇಲ್ಲದಂಥ ಮಾದರಿ ಎಲ್ಲ ಮುನಿಸಿಪಾಲಿಟಿಗಳಲ್ಲಿ ಜಾರಿ ಮಾಡಬೇಕು.
  • ಕಾಫಿ, ಟೀ ಎಸ್ಟೇಟ್‌ಗಳಲ್ಲಿ ಕಳೆ ನಾಶಕ ಕೆಮಿಕಲ್‌ಗಳ ಬಳಕೆಯಿಂದ ಆಗುತ್ತಿರುವ ದುಷ್ಪರಿಣಾಮಗಳು ಜನರಿಗೆ ಮನದಟ್ಟಾಗುವಂತೆ ಮಾಡಿ, ಕಳೆ ನಿಯಂತ್ರಣಗಳ ಕುರಿತು ಜನರಿಗೆ ಅರಿವಾಗುವಂತೆ ಮಾಡಬೇಕು.
  • ಜಲಾಶಯಗಳಲ್ಲಿ ಏಕ ಜಾತಿಯ ಜಲಚರಗಳ ಸಂಗೋಪನೆಯನ್ನು ಕೈಬಿಡಬೇಕು, ನೀರಿನಲ್ಲಿ ಹಿಂದೆ ಇದ್ದ ಜೀವಿ ವೈವಿಧ್ಯವನ್ನು ಮರುಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಬೇಕು.
  • ಗಾಡ್ಗೀಳ್​ ಸಮಿತಿಯ ವರದಿ ಕುರಿತು ರಾಜ್ಯದಾದ್ಯಂತ ವ್ಯಾಪಿಸಿದ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಕ್ರಮ ಕೈಗೊಳ್ಳಬೇಕು.
  • ಸಂಕ್ಷಿಪ್ತ ಹಾಗೂ ಸರಳ ಕನ್ನಡಾನುವಾದ ಮಾಡಲು ಸರ್ಕಾರಿ ಅಧಿಕಾರಿ, ಪರಿಸರ ಅಧಿಕಾರಿ, ಒಬ್ಬ ಪರಿಸರ ವಿಜ್ಞಾನಿ, ಒಬ್ಬ ಸರ್ಕಾರೇತರ ಸಂಸ್ಥೆಯ ಪ್ರತಿನಿಧಿ, ಒಬ್ಬ ಶಾಸಕ ಮತ್ತು ಒಬ್ಬ ಪತ್ರಕರ್ತರೂ ಇರಬೇಕು. ಅವರೆಲ್ಲರೂ ಕನ್ನಡಿಗರಾಗಿರಬೇಕು.
  • ಎರಡು ತಿಂಗಳ ಒಳಗೆ ಹೀಗೊಂದು ಸರ್ಕಾರಿ ಕನ್ನಡ ಕೈಪಿಡಿಯನ್ನು ಸಿದ್ಧಪಡಿಸಿ ಅದು ಪ್ರತಿ ತಾಲೂಕು ಮಟ್ಟದಲ್ಲಿ ಸಾಧ್ಯವಾದಷ್ಟು ಹೆಚ್ಚು ಗ್ರಾಮ ಪಂಚಾಯತ್ ಸದಸ್ಯರ ಸಮ್ಮುಖದಲ್ಲಿ ಡಿಸೆಂಬ‌ರ್ ಹೊತ್ತಿಗೆ ಬಿಡುಗಡೆಯಾಗಿ ಚರ್ಚೆಯಾಗುವಂತೆ ಸರ್ಕಾರ ಅನುಕೂಲ ಮಾಡಿಕೊಡಬೇಕು.
  • ಈ ವರದಿಯ ಪ್ರತಿಗಳು ಪ್ರತಿ ಪಂಚಾಯತ್ ಕಚೇರಿಯಲ್ಲೂ ಲಭ್ಯವಿರಬೇಕು.
  • ಪಶ್ಚಿಮಘಟ್ಟದ ವ್ಯಾಪ್ತಿಯಲ್ಲಿರುವ ಎಲ್ಲ ಸರ್ಕಾರಿ ಕಚೇರಿಗಳಲ್ಲೂ ಕಡ್ಡಾಯ ಬಿಸಿಲು ಕೊಯ್ಲು ಮತ್ತು ಮಳೆ ಕೊಯ್ಲಿನ ವ್ಯವಸ್ಥೆ ಜಾರಿ ಮಾಡಬೇಕು.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಗುಡ್ಡ ಕುಸಿತ: ಬೆಂಗಳೂರು - ಮಂಗಳೂರು ರೈಲು ಸಂಚಾರ ಬಂದ್,​ ಪ್ರಯಾಣಿಕರ ಪರದಾಟ - Landslide On Train Track

ಸಂವಾದದಲ್ಲಿ ಆನ್ಲೈನ್​ ಮೂಲಕ ಮಾತನಾಡಿದ ಮಾಧವ ಗಾಡ್ಗೀಳ್​, ಪಶ್ಚಿಮ ಘಟ್ಟದ ಸಂರಕ್ಷಣೆಯ ಉದ್ದೇಶದಿಂದ ತಾವು ಸಲ್ಲಿಸಿದ್ದ ವರದಿಯನ್ನು ತಪ್ಪಾಗಿ ವ್ಯಾಖ್ಯಾನಕ್ಕೆ ಮಾಡಿ ಜನರ ದಾರಿ ತಪ್ಪಿಸಲಾಗಿದೆ. ನಮ್ಮ ವರದಿಯು ಪಶ್ಚಿಮ ಘಟ್ಟದಲ್ಲಿ ಅಭಿವೃದ್ಧಿ ಚಟುವಟಿಕೆಯ ವಿರೋಧಿಯಾಗಿಲ್ಲ. ಅದು ಪರಿಸರವನ್ನು ರಕ್ಷಿಸಿಕೊಂಡು ಸುಸ್ಥಿರ ಅಭಿವೃದ್ಧಿ ಕ್ರಮಗಳನ್ನು ರೂಢಿಸಿಕೊಳ್ಳಬೇಕು ಎಂಬ ಶಿಫಾರಸ್ಸು ಮಾಡಿತ್ತು. ಪಶ್ಚಿಮ ಘಟ್ಟ ಅತ್ಯಂತ ಸೂಕ್ಷ್ಮ ಮತ್ತು ದುರ್ಬಲ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಆದ್ದರಿಂದ ಈ ಭಾಗದಲ್ಲಿ ಅಭಿವೃದ್ಧಿ ಚಟುವಟಿಕೆ ಮಾಡುವಾಗ ಅತ್ಯಂತ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಪ್ರೊ.ಟಿ.ವಿ.ರಾಮಚಂದ್ರ ಮಾತನಾಡಿ, ಸ್ಥಳೀಯ ಪ್ರಬೇಧದ ಸಸ್ಯಗಳನ್ನು ಬೆಳೆಸಲು ಆದ್ಯತೆ ನೀಡಬೇಕು. ಸ್ಥಳೀಯ ಪ್ರಬೇಧದ ಸಸ್ಯಗಳಿದ್ದರೆ ಉತ್ತಮ ಮಳೆಯಾಗುತ್ತದೆ. ಅಂತರ್ಜಲ ಹೆಚ್ಚುತ್ತದೆ. ಜೀವ ವೈವಿಧ್ಯತೆಯ ಸಂರಕ್ಷಣೆ ಆಗುತ್ತದೆ. ಎಲ್ಲಿ ಪರಿಸರದ ಅರಿವು ಹೆಚ್ಚಾಗಿದೆಯೋ ಅಲ್ಲಿ ಪರಿಸರದ ಸಂರಕ್ಷಣೆ ಆಗಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ನಾಗೇಶ್​ ಹೆಗಡೆ, ಕೋಲಾರ-ಚಿಕ್ಕಬಳ್ಳಾಪುರ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಸೇರಿದಂತೆ ಮತ್ತಿತರರಿದ್ದರು.

ABOUT THE AUTHOR

...view details