ಚಾಮರಾಜನಗರ: ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಗರ್ಭಿಣಿ ಮೃತಪಟ್ಟ ಘಟನೆ ಕೊಳ್ಳೇಗಾಲ ತಾಲೂಕಿನ ಕಾಮಗೆರೆಯಲ್ಲಿ ಬುಧವಾರ ಸಂಜೆ ನಡೆಯಿತು. ಹನೂರು ತಾಲೂಕಿನ ಅಜ್ಜಿಪುರ ಗ್ರಾಮದ ನಮಿತಾ (22) ಮೃತರು. ಇವರು 3 ತಿಂಗಳ ಗರ್ಭಿಣಿಯಾಗಿದ್ದು, ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದರು. ರಸ್ತೆ ದಾಟುತ್ತಿದ್ದಾಗ ಇವರಿಗೆ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದಿದೆ.
ಘಟನೆಯಿಂದ ರೊಚ್ಚಿಗೆದ್ದ ಮೃತ ಮಹಿಳೆಯ ಸಂಬಂಧಿಕರು ರಸ್ತೆ ತಡೆ ನಡೆಸಿ ಸಾರಿಗೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಾರಿಗೆ ಬಸ್ ಚಾಲಕರು ಬೇಜವಾಬ್ದಾರಿಯಿಂದ ಅತಿವೇಗವಾಗಿ ಬಸ್ ಚಲಾಯಿಸುತ್ತಾರೆ. ಬ್ಯಾರಿಕೇಡ್ ಇಲ್ಲವೇ ಹಂಪ್ಸ್ ಅಳವಡಿಸುವಂತೆ ನಾಲ್ಕು ತಿಂಗಳುಗಳಿಂದ ಪೊಲೀಸ್ ಇಲಾಖೆ ಹಾಗೂ ಡಿಪೋ ವ್ಯವಸ್ಥಾಪಕರಿಗೆ ಮನವಿ ಮಾಡಿದ್ದರೂ ಎಚ್ಚೆತ್ತುಕೊಂಡಿಲ್ಲ ಎಂದರು.