ಮೈಸೂರು: "ರಾಜ್ಯದಲ್ಲಿ ಗೂಂಡಾರಾಜ್ ಬಂದಿದೆ ಅಥವಾ ಬರುವ ಸೂಚನೆ ಇದೆ ಅಂತ ನಮಗೆ ಅನಿಸ್ತಿದೆ. ಕರ್ನಾಟಕದಲ್ಲಿ ತಾಲಿಬಾನ್ ಸರ್ಕಾರದ ಲಕ್ಷಣ ಇದು" ಎಂದು ಸಿ. ಟಿ. ರವಿ ಬಂಧನದ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದರು.
ನಗರದಲ್ಲಿಂದು ಇದೇ ತಿಂಗಳು 28ರಂದು, ಅದ್ಧೂರಿಯಾಗಿ ನಡೆಯಲಿರುವ ಹನುಮ ಜಯಂತಿ ಪ್ರಚಾರ ವಾಹನಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದರು. ಇದೇ ವೇಳೆ ಸಿ ಟಿ ರವಿ ಬಂಧನ ಹಾಗೂ ಬಿಡುಗಡೆ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಹುಣಸೂರಿನ ಹನುಮ ಜಯಂತಿ ವೇಳೆ ನನಗೂ ಈ ರೀತಿಯ ಅನುಭವ ಆಗಿದೆ. ಜನಪ್ರತಿನಿಧಿಗಳು ಎಷ್ಟೋ ಬಾರಿ ಸಭ್ಯತೆ ಮೀರಿ ಮಾತನಾಡುತ್ತಾರೆ. ಸದನದಲ್ಲಿ ಸಭಾಧ್ಯಕ್ಷರ ಸುಪರ್ದಿಯಲ್ಲಿ ಇರುತ್ತದೆ. ಅಲ್ಲಿಗೆ ಪೊಲೀಸರು ಹೇಗೆ ಹೋದರು? ವಿಧಾನಸಭೆಯಲ್ಲಿ ಕಾಂಗ್ರೆಸ್ನವರು, ಪಾಕಿಸ್ತಾನ ಜಿಂದಾಬಾದ್ ಎಂದಾಗ ಇದೇ ಲಕ್ಷ್ಮೀ ಹೆಬಾಳ್ಕರ್ ಹೇಳಿದ್ದು ಏನು? ಈಗ ಈ ವಿಚಾರದಲ್ಲಿ ಫಾರೆನ್ಸಿಕ್ ರಿಪೋರ್ಟ್ ಬರಲಿ, ಯಾರದ್ದು ತಪ್ಪು ಎಂಬುದು ಗೊತ್ತಾಗಲಿದೆ. ಆ ನಂತರ ಸೂಕ್ತ ಕ್ರಮವಾಗಲಿ" ಎಂದು ಒತ್ತಾಯಿಸಿದರು.
"ಪೊಲೀಸರನ್ನು ಛೂ ಬಿಟ್ಟು ಈ ಕೆಲಸ ಮಾಡಿಸಲಾಗುತ್ತಿದೆ. ಉತ್ತರ ಪ್ರದೇಶ ಹಾಗೂ ಬಿಹಾರಗಳೇ ಬದಲಾಗಿವೆ. ತಮಿಳುನಾಡಿನಲ್ಲಿ ಜಯಲಲಿತಾ ಕರುಣಾನಿಧಿ ನಡುವೆ ನಡೆದ ರೀತಿಯಲ್ಲಿ ಇಲ್ಲಿ ನಡೆದರೆ, ಗೌರವ ಬರುತ್ತದೆಯೇ?" ಎಂದು ಪ್ರಶ್ನಿಸಿದರು.