ಹಾವೇರಿ:ವೀರಶೈವ ಪರಂಪರೆಯಲ್ಲಿ ಸ್ವಾಮೀಜಿಗಳನ್ನು ಮನೆಗೆ ಕರೆದು ಪ್ರಸಾದ ನೀಡುವುದು ಪದ್ಧತಿ. ಆದರೆ ಸ್ವಾಮೀಜಿಗಳೇ ಭಕ್ತರನ್ನು ಮಠಕ್ಕೆ ಕರೆದು ಪ್ರಸಾದ ನೀಡುವ ಪರಂಪರೆ ಹಾವೇರಿಯ ಸಿಂದಗಿ ಮಠದಲ್ಲಿದೆ. ಮಠದ ಲಿಂಗೈಕ್ಯ ಶಾಂತವೀರೇಶ್ವರ ಶ್ರೀಗಳ ಸ್ಮರಣೋತ್ಸವದ ದಿನಗಳ ನಂತರ ಮಠದಲ್ಲಿ ಊರೂಟ ಎಂಬ ಪದ್ಧತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ದಿನ ಮಠದ ವಟುಗಳು ಮನೆ ಮನೆಗೆ ತೆರಳಿ ಭಕ್ತರನ್ನು ಊರೂಟಕ್ಕೆ ಆಹ್ವಾನಿಸುತ್ತಾರೆ.
ಈ ದಿನಗಳಲ್ಲಿ ಸಿಂದಗಿ ಶಾಂತ ವೀರೇಶ್ವರರ ಗದ್ದುಗೆಯನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗುತ್ತದೆ. ವಿದ್ಯುತ್ ದೀಪಗಳಿಂದಲೂ ಮಠ ಜಗಮಗಿಸುತ್ತದೆ. ಐವತ್ತು ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿ ಗದ್ದುಗೆ ದರ್ಶನ ಪಡೆದ ನಂತರ ಪ್ರಸಾದ ಸೇವಿಸಿಸುತ್ತಾರೆ. ಭೋಜನವನ್ನು ವಟುಗಳೇ ತಯಾರಿಸಿ ಭಕ್ತರಿಗೆ ಉಣಬಡಿಸುತ್ತಾರೆ. ಉಂಡ ಭಕ್ತರ ತಟ್ಟೆಯನ್ನೂ ಸಹ ವಟುಗಳೇ ತೊಳೆಯುತ್ತಾರೆ. ಊರೂಟದ ದಿನ ಮಠದಲ್ಲಿ ಈ ಹಿಂದೆ ವ್ಯಾಸಂಗ ಮಾಡಿದ ಮಾಜಿ ವಿದ್ಯಾರ್ಥಿಗಳೂ ಬರುತ್ತಾರೆ.
ಈ ಪರಂಪರೆಯನ್ನು ಸಿಂದಗಿಮಠ ಲಿಂಗೈಕ್ಯ ಶಾಂತವೀರೇಶ್ವರ ಶ್ರೀಗಳು ಆಚರಣೆಗೆ ತಂದಿದ್ದರಂತೆ. ಅವರು ಲಿಂಗೈಕ್ಯರಾದ ನಂತರ ವಟುಗಳು ಪದ್ಧತಿಯನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಊಟಕ್ಕೆ ಉತ್ತರ ಕರ್ನಾಟಕದ ಖಡಕ್ ರೊಟ್ಟಿ, ಕರಿಂಡಿ ಪಾಯಸ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ಸಿದ್ಧಪಡಿಸಲಾಗುತ್ತದೆ. ಕಜ್ಜಾಯ ಪರಂಪರೆಯೂ ಇದೆ. ಊರೂಟ ಇರುವಾಗ ಕೆಲವು ಗ್ರಾಮಗಳ ಭಕ್ತರು ಸಿಹಿ ಪದಾರ್ಥಗಳನ್ನು ಮಠಕ್ಕೆ ನೀಡುತ್ತಾರೆ. ಒಂದೇ ದಿನ ಐವತ್ತು ಸಾವಿರ ಜನರಿಗೆ ಎಲ್ಲಿಯೂ ಯಾವುದೇ ರೀತಿಯ ತೊಂದರೆಯಾಗದಂತೆ ವಟುಗಳು ನೋಡಿಕೊಳ್ಳುತ್ತಾರೆ. ಪ್ರಸ್ತುತ ವರ್ಷ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದರು.