ಬೆಂಗಳೂರು:ಲೈಂಗಿಕ ದೌರ್ಜನ್ಯದ ಆರೋಪ ಪ್ರಕರಣದಲ್ಲಿ ಕೊನೆಗೂ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕಳೆದ ರಾತ್ರಿ ವಿಶೇಷ ತನಿಖಾ ತಂಡ (ಎಸ್ಐಟಿ) ಬಂಧಿಸಿದೆ. ಗುರುವಾರ ಮಧ್ಯಾಹ್ನ 12 ಗಂಟೆಗೆ ಜರ್ಮನಿಯ ಮ್ಯೂನಿಚ್ನಿಂದ ಹೊರಟು ತಡರಾತ್ರಿ ಬೆಂಗಳೂರಿಗೆ ಬಂದಿಳಿದ ಆರೋಪಿಯನ್ನು ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಇಮಿಗ್ರೇಷನ್ ಅಧಿಕಾರಿಗಳು ಮೊದಲು ವಶಕ್ಕೆ ಪಡೆದು, ಬಳಿಕ ಎಸ್ಐಟಿಗೆ ಒಪ್ಪಿಸಿದ್ದಾರೆ. ಈ ಮೂಲಕ 34 ದಿನಗಳ ಪ್ರಜ್ವಲ್ ರೇವಣ್ಣ ಕಣ್ಣಾಮುಚ್ಚಾಲೆ ಆಟಕ್ಕೆ ತೆರೆ ಬಿದ್ದಿದೆ. ಈ ಪ್ರಕರಣ ಇಲ್ಲಿಯವರೆಗೆ ನಡೆದು ಬಂದ ಕಾಲಾನುಕ್ರಮ ಹೀಗಿದೆ.
- ಏಪ್ರಿಲ್ 21: ಹಾಸನದ ವಿವಿಧೆಡೆ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ವೈರಲ್
- ಏಪ್ರಿಲ್ 22: ಕೆಲವು ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳ ಮೂಲಕವೂ ವೈರಲ್.
- ಏಪ್ರಿಲ್ 23: ವಿಡಿಯೋ ವೈರಲ್ ಮಾಡುವ ಮೂಲಕ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ನವೀನ್ ಗೌಡ ಮತ್ತಿತರರ ವಿರುದ್ಧ ಹಾಸನದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು.
- ಏಪ್ರಿಲ್ 26: ಬೆಳಿಗ್ಗೆ 9:30ಕ್ಕೆ ಪಡುವಲಹಿಪ್ಪೆಯ ಮತಕೇಂದ್ರದಲ್ಲಿ ಪ್ರಜ್ವಲ್ ರೇವಣ್ಣರಿಂದ ಮತ ಚಲಾವಣೆ.
- ಏಪ್ರಿಲ್ 26: ಸಂಜೆ ಕೆ.ಆರ್.ನಗರದಲ್ಲಿ ಹತ್ತಿರದ ಸಂಬಂಧಿಯೊಬ್ಬರ ಸಾವಿನ ಹಿನ್ನೆಲೆಯಲ್ಲಿ ಹೋಗಿ ಅಲ್ಲಿಂದ ವಾಪಸಾಗಿದ್ದ ಪ್ರಜ್ವಲ್ ರೇವಣ್ಣ.
- ಏಪ್ರಿಲ್ 26: ರಾತ್ರಿ ಹೊಳೆನರಸೀಪುರಿಂದ ಹೊರಟ ಪ್ರಜ್ವಲ್ ರೇವಣ್ಣ, ಬೆಂಗಳೂರಿಗೆ ಪ್ರಯಾಣ.
- ಏಪ್ರಿಲ್ 27: ಬೆಳಗ್ಗಿನ ಜಾವ ಬೆಂಗಳೂರು ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದಿಂದ ಜರ್ಮನಿಗೆ ಪ್ರಯಾಣ. ವಿಡಿಯೋ ವೈರಲ್ ಸಂಬಂಧ ತನಿಖೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗದಿಂದ ರಾಜ್ಯ ಸರ್ಕಾರಕ್ಕೆ ಪತ್ರ.
- ಏಪ್ರಿಲ್ 27: ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ, ಹಂಚಿಕೆ ವಿಚಾರವಾಗಿ ತನಿಖೆ ನಡೆಸುವಂತೆ ಎಸ್ಐಟಿ ರಚಿಸಿ ರಾಜ್ಯ ಸರ್ಕಾರದಿಂದ ಆದೇಶ. ಎಡಿಜಿಪಿ ಬಿ.ಕೆ.ಸಿಂಗ್ , ಎಸ್ಪಿಗಳಾದ ಸೀಮಾ ಲಾಟ್ಕರ್ ಮತ್ತು ಸುಮನ್ ಡಿ.ಪೆನ್ನೇಕರ್ ನೇತೃತ್ವದಲ್ಲಿ ಎಸ್ಐಟಿ ರಚನೆ.
- ಏಪ್ರಿಲ್ 28: ಪ್ರಜ್ವಲ್ ರೇವಣ್ಣ ವಿರುದ್ದ ಹೊಳೆನರಸೀಪುರ ನಗರ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು.
- ಏಪ್ರಿಲ್ 28: ಅಧಿಕೃತವಾಗಿ ಎಸ್ಐಟಿ ತನಿಖೆ ಆರಂಭ.
- ಏಪ್ರಿಲ್ 29: ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ನೋಟಿಸ್.
- ಮೇ 1: ಸಂತ್ರಸ್ತೆಯೊಬ್ಬರ ಹೇಳಿಕೆ ಆಧರಿಸಿ ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು.
- ಮೇ 1: ವಿಚಾರಣೆಗೆ ಹಾಜರಾಗಲು 7 ದಿನ ಕಾಲಾವಕಾಶ ನೀಡುವಂತೆ ತಮ್ಮ ವಕೀಲರ ಮೂಲಕ ಪ್ರಜ್ವಲ್ ರೇವಣ್ಣ ಮನವಿ, ಎಕ್ಸ್ ಖಾತೆಯ ಮೂಲಕ ಮಾಹಿತಿ.
- ಮೇ 1: ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಲು ಬಳಸಿದ್ದ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಸಿಎಂ ಸಿದ್ದರಾಮಯ್ಯರಿಂದ ಪ್ರಧಾನಿ ನರೇಂದ್ರ ಮೋದಿಗೆ ಪತ್ರ.
- ಮೇ 7: ಇಂಟರ್‌ಪೋಲ್ ಮೂಲಕ ಪ್ರಜ್ವಲ್ ರೇವಣ್ಣ ವಿರುದ್ದ ಬ್ಲ್ಯೂ ಕಾರ್ನರ್ ನೊಟೀಸ್ ಜಾರಿ.
- ಮೇ 15: ಜರ್ಮನಿಯ ಮ್ಯೂನಿಚ್ನಿಂದ ಭಾರತಕ್ಕೆ ಮರಳಲು ಪ್ರಜ್ವಲ್ ಬುಕ್ ಮಾಡಿದ್ದ ಟಿಕೆಟ್ ರದ್ದು.
- ಮೇ 10: ಜರ್ಮನಿಯಿಂದ ಬೇರೆಡೆಗೆ ಪ್ರಜ್ವಲ್ ತೆರಳಿರುವ ಕುರಿತು ವದಂತಿ.
- ಮೇ 20: ಎಲ್ಲಿದ್ದರೂ ಬಂದು ಧೈರ್ಯವಾಗಿ ತನಿಖೆ ಎದುರಿಸುವಂತೆ ಹೆಚ್.ಡಿ.ಕುಮಾರಸ್ವಾಮಿ ಮನವಿ.
- ಮೇ 22: ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಸಿಎಂ ಸಿದ್ದರಾಮಯ್ಯರಿಂದ ಕೇಂದ್ರಕ್ಕೆ ಪತ್ರ
- ಮೇ 23: ಪ್ರಜ್ವಲ್ ರೇವಣ್ಣ ವಿರುದ್ಧ ಶೋಕಾಸ್ ನೋಟಿಸ್ ಜಾರಿಗೊಳಿಸಿದ ವಿದೇಶಾಂಗ ಸಚಿವಾಲಯ.
- ಮೇ 23: ಶರಣಾಗುವಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಂದ ಬಹಿರಂಗ ಎಚ್ಚರಿಕೆ
- ಮೇ 27: ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆಗೊಳಿಸಿದ ಪ್ರಜ್ವಲ್, ಮೇ 31ರಂದು ಎಸ್ಐಟಿ ತನಿಖಾಧಿಕಾರಿಗಳ ಮುಂದೆ ಹಾಜರಾಗುವುದಾಗಿ ಹೇಳಿಕೆ.
- ಮೇ 29: ಹಾಸನ ನಗರದ ಆರ್.ಸಿ.ರಸ್ತೆಯಲ್ಲಿರುವ ಸಂಸದರ ನಿವಾಸದಲ್ಲಿ ಎಸ್‌ಐಟಿ ಹಾಗೂ ಎಫ್‌ಎಸ್‌ಎಲ್ ತಂಡದಿಂದ ಶೋಧ, ಪ್ರಜ್ವಲ್ ರೇವಣ್ಣ ಕೊಠಡಿಯಲ್ಲಿದ್ದ ಹಾಸಿಗೆ, ದಿಂಬು ಮತ್ತಿತರ ವಸ್ತುಗಳು ವಶಕ್ಕೆ.
- ಮೇ 30: ಮಧ್ಯಾಹ್ನ ಜರ್ಮನಿಯ ಮ್ಯೂನಿಚ್ನಿಂದ ಬೆಂಗಳೂರಿಗೆ ಪ್ರಜ್ವಲ್ ಪ್ರಯಾಣ.
- ಮೇ 31: ಮಧ್ಯರಾತ್ರಿ 12:48ಕ್ಕೆ ಬೆಂಗಳೂರಿಗೆ ಬಂದಿಳಿದ ಪ್ರಜ್ವಲ್, ಎಸ್ಐಟಿಯಿಂದ ಬಂಧನ