ಹುಬ್ಬಳ್ಳಿ:''ಪ್ರಜ್ವಲ್ ರೇವಣ್ಣ ಕ್ಷಮಿಸಲಾರದಂತಹ ಅಪರಾಧ ಮಾಡಿದ್ದಾರೆ. ಹೀಗಾಗಿ ಅವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ'' ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನಗರದಲ್ಲಿ ಇಂದು (ಶನಿವಾರ) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಪ್ರಜ್ವಲ್ ರೇವಣ್ಣನನ್ನು ಎಸ್ಐಟಿ ಕಸ್ಟಡಿಗೆ ಕೊಟ್ಟಿದ್ದಾರೆ. ಸರಿಯಾದ ರೀತಿಯಲ್ಲಿ ತನಿಖೆ ಆಗಬೇಕು. ಇದೊಂದು ಗಂಭೀರ ಪ್ರಕರಣ. ಭಾರತದಂತಹ ದೇಶದಲ್ಲಿ ಮಹಿಳೆಯರನ್ನು ನಾವು ಗೌರವದಿಂದ ಕಾಣುತ್ತೇವೆ. ಈ ರೀತಿಯ ಘಟನೆ ನಡೆದಿರುವುದು ಹೇಸಿಗೆ ಹುಟ್ಟಿಸುವಂತಾಗಿದೆ, ಮನಸ್ಸಿಗೆ ಕಿರಿಕಿರಿ ಆಗುತ್ತಿದೆ. ಇದನ್ನು ಅತ್ಯಂತ ಕಟ್ಟುನಿಟ್ಟಾಗಿ ತನಿಖೆಗೆ ಒಳಪಡಿಸಬೇಕು. ಈ ನಿಟ್ಟಿನಲ್ಲಿ ನ್ಯಾಯಾಂಗ ವ್ಯವಸ್ಥೆ ಸೂಕ್ತ ಕ್ರಮ ಕೈಗೊಳ್ಳಲಿದೆ ಅನ್ನೋ ಭರವಸೆ ಇದೆ. ತ್ವರಿತಗತಿಯಲ್ಲಿ ತನಿಖೆ ಮುಗಿಸಿ ಗರಿಷ್ಠ ಶಿಕ್ಷೆ ಕೊಡುವಂತಾಗಬೇಕು'' ಎಂದರು.
ಪ್ರಜ್ವಲ್ ರೇವಣ್ಣ ರಾಜ್ಯದ ಕ್ಷಮೆ ಕೇಳಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಜೋಶಿ, ''ಆರೋಪಿ ಸ್ಥಾನದಲ್ಲಿದ್ದವರು ಕ್ಷಮೆ ಕೇಳಿದ ಕೂಡಲೇ ಬಿಟ್ಟುಬಿಡೋಕೆ ಆಗುತ್ತದೆಯೇ? ಯಾಕೆ ಕ್ಷಮೆ ಕೇಳಿದರು ಅಂತ ಪ್ರಜ್ವಲ್ ಉತ್ತರ ಕೊಡಲಿ. ಅವರು ಕ್ಷಮೆ ಕೇಳುವುದಿದ್ದರೆ ಸಂತ್ರಸ್ತರ ಕ್ಷಮೆ ಕೇಳಲಿ. ಪ್ರಜ್ವಲ್ಗೆ ಆಗುವ ಶಿಕ್ಷೆ ಆಗಲೇಬೇಕು. ಪೆನ್ ಡ್ರೈವ್ ಹಂಚಿಕೆ ಇತ್ಯಾದಿಗಳನ್ನು ನೋಡಿದಾಗ ಪ್ರಜ್ವಲ್ ಕ್ಷಮೆಗೆ ಅರ್ಹರಲ್ಲ'' ಎಂದು ಕಿಡಿಕಾರಿದರು.
''ವಾಲ್ಮೀಕಿ ಅಭಿವೃದ್ಧಿ ನಿಗಮ ಅಧಿಕಾರಿ ಆತ್ಮಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ರಾಜೀನಾಮೆ ಕೊಡಬೇಕು, ಆತನನ್ನು ಅರೆಸ್ಟ್ ಮಾಡಬೇಕು. ಬ್ಯಾಂಕ್ ಮೂಲಕ ಎಲ್ಲ ವ್ಯವಹಾರ ಆಗಿದೆ. ಅವರು ಏನೇನು ಮಾಡಬೇಕು. ಅದೆಲ್ಲ ಪ್ರಯತ್ನ ಮಾಡತಿದಾರೆ. ಆದರೂ ಸಾಕ್ಷಿ ನಾಶ, ಬೆದರಿಸುವ ಕೆಲಸ ಆಗ್ತಿದೆ. ಕೂಡಲೇ ಆತನನ್ನು ಬಂಧಿಸಬೇಕು, ಅವರಿಂದ ರಾಜೀನಾಮೆ ಪಡೆಯಬೇಕು. ಈ ಕೇಸ್ನ್ನು ಸಿಬಿಐನಂತಹ ಸಂಸ್ಥೆ ತನಿಖೆ ಮಾಡಬೇಕು. ಕಾಂಗ್ರೆಸ್ ಪಕ್ಷದಲ್ಲಿ 100 ಪರ್ಸೆಂಟ್ ಭ್ರಷ್ಟಾಚಾರ ಇದೆ. ಗುತ್ತಿಗೆದಾರನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಂತೋಷ್ ಪಾಟೀಲ್ ಮಾದರಿಯಲ್ಲಿ ಆತ್ಮಹತ್ಯೆ ಆಗಿದೆ. ಇನ್ನೊಂದು ಕಡೆ ಚೆಕ್ ಮೂಲಕ ಭ್ರಷ್ಟಾಚಾರ ಆಗಿದೆ. ಇದಕ್ಕಿಂತ ಗಂಭೀರತೆ ಏನು ಬೇಕು. ಹಿಂದೆ ಇಂದಿರಾ ಗಾಂಧಿ ಕಾಲದಲ್ಲಿ ನಗರವಾಲಾ ಪ್ರಕರಣ ಆಗಿತ್ತು. ಇದು ಅದಕ್ಕೆ ಹೋಲುತ್ತೆ'' ಎಂದು ಜೋಶಿ ಹೇಳಿದ್ರು.
ಇದನ್ನೂ ಓದಿ:ಮಾನಹಾನಿ ಪ್ರಕರಣ: ಸಿಎಂ, ಡಿಸಿಎಂಗೆ ಜಾಮೀನು; ರಾಹುಲ್ ಗಾಂಧಿ ವಿನಾಯ್ತಿ ಬಗ್ಗೆ ಮಧ್ಯಾಹ್ನ ತೀರ್ಪು - Court Bail to CM and DCM