ಹಿರಿಯ ಬಿಜೆಪಿ ನಾಯಕ ಡಾ.ಪ್ರಭಾಕರ ಕೋರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೆಳಗಾವಿ:"ಕೆಲವು ವರ್ಷಗಳ ಹಿಂದೆ ಬಿಜೆಪಿ ನಾಯಕರು ಬೆಳಗಾವಿ ಉತ್ತರದಿಂದ ಸ್ಪರ್ಧಿಸುವಂತೆ ಪುತ್ರ ಅಮಿತ್ ಕೋರೆ ಅವರನ್ನು ಒತ್ತಾಯಿಸಿದ್ದರು. ಆದರೆ ಆಗ ಅವರು ಸ್ಪರ್ಧಿಸಲಿಲ್ಲ. ಚುನಾವಣೆಯಲ್ಲಿ ಅನಿಲ ಬೆನಕೆ ಆರಿಸಿ ಬಂದರು. ಈ ಬಾರಿ ಚಿಕ್ಕೋಡಿಯಿಂದ ಸ್ಪರ್ಧಿಸಲು ಟಿಕೆಟ್ ಕೇಳಿದ್ದಾರೆ" ಎಂದು ಕೆಎಲ್‌ಇ ಸಂಸ್ಥೆಗಳ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ತಿಳಿಸಿದರು.
"ಚಿಕ್ಕೋಡಿ ಭಾಗದಲ್ಲಿ ಎರಡು ಸಕ್ಕರೆ ಕಾರ್ಖಾನೆಗಳಿವೆ. ಸುಮಾರು 75 ಸಾವಿರ ರೈತರು ಸದಸ್ಯರಿದ್ದಾರೆ. ಎರಡು ಸಕ್ಕರೆ ಕಾರ್ಖಾನೆಗಳು 33 ಲಕ್ಷ ಕಬ್ಬು ಕ್ರಷಿಂಗ್ ಮಾಡುತ್ತಿವೆ. ಹೀಗಾಗಿ ಚಿಕ್ಕೋಡಿ ಭಾಗದಲ್ಲಿ ಅಮಿತ್ ಕೋರೆ ಉತ್ತಮ ಹೆಸರು ಮಾಡಿದ್ದಾರೆ. ಲೋಕಸಭೆಗೆ ಸ್ಪರ್ಧಿಸುವಂತೆ ಅವರ ಅಭಿಮಾನಿಗಳ ಒತ್ತಾಯವೂ ಇದೆ" ಎಂದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಉದ್ದೇಶದಿಂದ ಚಿಕ್ಕೋಡಿಯಲ್ಲಿ ನಿರ್ಮಿಸಿರುವ ಆಂಗ್ಲ ಮಾಧ್ಯಮದ ಕೆಎಲ್ಇ ಶಾಲೆಯ ಉದ್ಘಾಟನೆ ಕಾರ್ಯಕ್ರಮ ಫೆಬ್ರುವರಿ 28ರಂದು ನಡೆಯಲಿದ್ದು, ಈ ಕುರಿತು ಕೆಎಲ್ಇ ಲಿಂಗರಾಜ ಮಹಾವಿದ್ಯಾಲಯದಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
"ಶಾಲೆಯನ್ನು ಕೇಂದ್ರ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಉದ್ಘಾಟಿಸುವರು. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಗೌರವ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಶಾಸಕ ಗಣೇಶ ಹುಕ್ಕೇರಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಚಿಕ್ಕೋಡಿ ಪುರಸಭೆ ಮಾಜಿ ಅಧ್ಯಕ್ಷ ಪ್ರವೀಣ ಕಾಂಬಳೆ ಆಗಮಿಸಲಿದ್ದಾರೆ. ಕೆಎಲ್ಇ ಅಧ್ಯಕ್ಷ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಲಿದ್ದಾರೆ" ಎಂದು ಹೇಳಿದರು.
ಚಿಕ್ಕೋಡಿಯಲ್ಲಿ 17ನೇ ಅಂಗ್ಲ ಮಾಧ್ಯಮ ಶಾಲೆ:17ನೇ ಸಿಬಿಎಸ್ಇ ಆಂಗ್ಲ ಮಾಧ್ಯಮ ಶಾಲೆ ಇದಾಗಿದೆ. 17 ಕೋಟಿ ರೂ ಖರ್ಚು ಮಾಡಿ ನಿರ್ಮಿಸಿದ್ದೇವೆ. ಈಗಾಗಲೇ ಅಥಣಿ, ಸವದತ್ತಿ, ಬೈಲಹೊಂಗಲ, ಗದಗ, ಹಾವೇರಿ, ನಿಪ್ಪಾಣಿ, ಬೆಂಗಳೂರು ಹಾಗು ಮಹಾರಾಷ್ಟ್ರದಲ್ಲಿ ಸಿಬಿಎಸ್ಇ ಶಾಲೆಗಳನ್ನು ಕೆಎಲ್ಇ ಸಂಸ್ಥೆ ಪ್ರಾರಂಭಿಸಿದೆ. ಮಕ್ಕಳಿಗೆ ಆಟದ ಮೈದಾನ, ಕ್ಯಾಂಟಿನ್ ವ್ಯವಸ್ಥೆ, ಗುಣಮಟ್ಟದ ಶಿಕ್ಷಣವನ್ನು ನೀಡಲಾಗುವುದು. ಈಗಾಗಲೇ ಶಾಲೆಗೆ ಪ್ರವೇಶಾತಿ ಪ್ರಾರಂಭವಾಗಿವೆ ಎಂದು ಕೋರೆ ಮಾಹಿತಿ ನೀಡಿದರು.
ಇದನ್ನೂ ಓದಿ:ಬೆಳಗಾವಿಯಲ್ಲೊಂದು ಕನ್ನಡ ಮದುವೆ; ಇದು ಮದುವೆಯೋ, ಸಾಹಿತ್ಯ ಸಮ್ಮೇಳನವೋ.. ಹೊಸ ಇತಿಹಾಸ ಬರೆದ ಗಡಿ ಕನ್ನಡಿಗ