ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಇಂದು ಅದ್ಧೂರಿಯಾಗಿ ರೋಡ್ ಶೋ ನಡೆಸಿ ಮತಬೇಟೆ ಮಾಡಿದರು.
ನಗರದ ಶಾಮನೂರು ಆಂಜನೇಯ, ನಿಟುವಳ್ಳಿ ಬಡಾವಣೆಯ, ಶ್ರೀ ದುರ್ಗಾಂಭಿಕಾ ದೇವಿ ಹಾಗು ಹಳೇ ದಾವಣಗೆರೆಯಲ್ಲಿರುವ ದುಗ್ಗಮ್ಮ ದೇವಿಗೆ ಪೂಜೆ ಸಲ್ಲಿಸಿ ರೋಡ್ ಶೋ ಆರಂಭಿಸಿದರು. ದಾವಣಗೆರೆ ದಕ್ಷಿಣ ಮತ ಕ್ಷೇತ್ರದಿಂದ ಒಂದು ರ್ಯಾಲಿ ಹಾಗು ದಾವಣಗೆರೆ ಉತ್ತರ ಮತ ಕ್ಷೇತ್ರದಿಂದ ಮತ್ತೊಂದು ರ್ಯಾಲಿ ಸೇರಿದಂತೆ ಒಟ್ಟು ಎರಡು ಕಡೆಯಿಂದ ಚುನಾವಣೆ ರ್ಯಾಲಿ ನಡೆಸಲಾಯಿತು. ಎರಡು ಮೆರವಣಿಗೆಯಲ್ಲಿ ಇಪ್ಪತ್ತೈದು ಸಾವಿರ ಜನ ಸೇರಿದ್ದರು. ಈ ವೇಳೆ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್, ಹೊನ್ನಾಳಿ ಶಾಸಕ ಡಿ.ಜಿ ಶಾಂತನಗೌಡ, ಮಾಯಕೊಂಡ ಶಾಸಕ ಬಸವಂತಪ್ಪ, ಹಾಗೂ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್ ಸಾಥ್ ನೀಡಿದರು.
ಇಂದು ನಡೆದ ಅದ್ಧೂರಿ ರೋಡ್ ಶೋನಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ಶಾಮನೂರು, ಪುತ್ರಿ ಶ್ರೇಷ್ಠ ಶಾಮನೂರು ಭಾಗಿಯಾಗಿ ತಾಯಿ ಪರ ಮತಯಾಚಿಸಿದರು.