ದಾವಣಗೆರೆ: ಪ್ರಸ್ತುತ ದಿನಗಳಲ್ಲಿ ಕುಂಬಾರಿಕೆ ಕಸುಬು ಮಾಸಿಹೋಗುತ್ತಿದೆ. ಕೈ ಕೆಸರಾಗುತ್ತೆ ಎಂದು ಯುವಕರು ಅದರಿಂದ ದೂರ ಸರಿದು ಉದ್ಯೋಗಕ್ಕಾಗಿ ಪಟ್ಟಣ ಸೇರುತ್ತಿದ್ದಾರೆ. ಮನೆಯಲ್ಲಿ ಉಳಿದ ಹಿರಿಯರಲ್ಲಿ ಮಾತ್ರ ಕುಂಬಾರಿಕೆ ಕಸುಬು ಉಸಿರಾಗಿ ಉಳಿದುಕೊಂಡಿದೆ. ಅದರೆ ದಾವಣಗೆರೆಯ ವಿದ್ಯಾವಂತ, ಪದವೀಧರ ಶಿವಕುಮಾರ್ ಅವರು ತಮ್ಮ ತಾತ, ಮುತ್ತಾತ ನಡೆಸಿಕೊಂಡು ಬಂದಿರುವ ಕುಲಕಸುಬನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ನಗರದ ಭಾರತ್ ಕಾಲೊನಿಯ ಕುಂಬಾರ ಸೊಸೈಟಿಯ ಮುತ್ತಪ್ಪ ಹಾಗೂ ಓಂಕಾರಮ್ಮ ದಂಪತಿಯ ಪುತ್ರ ಶಿವಕುಮಾರ್. ಇವರು ದೀಪಾವಳಿ ಹಬ್ಬಕ್ಕೆ ವಿಶೇಷ ಹಣತೆಗಳನ್ನು ತಯಾರಿಸಿದ್ದಾರೆ. ಕುಂಬಾರಿಕೆಗೆ ಆಧುನಿಕ ಸ್ಪರ್ಶ ಕೊಟ್ಟು ತಯಾರಿಸಿದ ವಿಶೇಷ ಹಣತೆಗಳಿಗೆ ರಾಜ್ಯದಲ್ಲೇ ಹೆಚ್ಚು ಬೇಡಿಕೆ ಇದೆ.
ದಾವಣಗೆರೆಯ ದೃಶ್ಯಕಲಾ ಕಾಲೇಜಿನಲ್ಲಿ ಬಿವಿಎ, ಎಂಪಿಎ ಪದವಿ ಪಡೆದಿದ್ದರೂ ಕೂಡ ಕುಟುಂಬ ತಲೆತಲಾಂತರದಿಂದ ಮಾಡಿಕೊಂಡು ಬಂದ ಕುಂಬಾರಿಕೆ ಕಸಬನ್ನು ಮುಂದುವರೆಸಿದ್ದಾರೆ. ಕಲಾವಿದ ಶಿವಕುಮಾರ್ ಅವರ ಪೋಷಕರು ಬೆಳಕಿನ ಹಬ್ಬ ದೀಪಾವಳಿಗೆ ಸಣ್ಣಪುಟ್ಟ ಮಣ್ಣಿನ ಹಣತೆ, ದೀವಿಗೆ ಹಾಗೂ ಇತರ ವೇಳೆ ಮಡಿಕೆ, ಕುಡಿಕೆ ತಯಾರಿಸಿ ಬದುಕು ಕಟ್ಟಿಕೊಂಡಿದ್ದರು. ಇದೀಗ ಅವರ ಪುತ್ರ ಶಿವಕುಮಾರ್ ಸ್ನಾತಕೋತ್ತರ ಪದವಿ ಪೂರೈಸಿ, ಅತ್ಯಾಕರ್ಷಕ ದೀಪ ಸೇರಿ ನಾನಾ ಕರಕುಶಲ ವಸ್ತು ತಯಾರಿಸಿ ಕುಲಕಸುಬಿಗೆ ಆಧುನಿಕ ಟಚ್ ನೀಡಿದ್ದಾರೆ. ಇವರು ತಯಾರಿಸಿದ ವಿಶೇಷ ದೀಪಾವಳಿ ದೀಪಗಳು ಬೆಂಗಳೂರು, ಮೈಸೂರು, ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ ಸಾಕಷ್ಟು ಜಿಲ್ಲೆಗಳಲ್ಲಿ ಮಾರಾಟ ಆಗುತ್ತಿವೆ.
25 ರೀತಿಯ ಹಣತೆಗಳಿಗೆ ಆಧುನಿಕ ಟಚ್: ಪ್ರತಿ ದೀಪಾವಳಿ ಹಬ್ಬದ ವೇಳೆ ಕಲಾವಿದ ಶಿವಕುಮಾರ್ ಅವರು ವಿಶೇಷ ಹಣತೆಗಳನ್ನು ತಯಾರಿಸಿ ಆಧುನಿಕ ಟಚ್ ನೀಡಿ ಮಾರಾಟ ಮಾಡುತ್ತಾ ಬಂದಿದ್ದಾರೆ. ಶಿವಕುಮಾರ್ ಅವರ ಕೈಚಳಕದಲ್ಲಿ ಮೂಡಿ ಬಂದ 25 ರೀತಿಯ ಹಣತೆಗಳಿಗೆ ರಾಜ್ಯಾದ್ಯಂತ ಬೇಡಿಕೆ ಇದೆ. ಆನೆ ದೀಪ, ಲಕ್ಷ್ಮೀ ದೀಪ, ಗಣೇಶ ದೀಪ, ಹುರುಳಿ ದೀಪ, ಆಮೆ ದೀಪ, ನವಿಲು ದೀಪ, ಹಂಸ ದೀಪ, ಲ್ಯಾಪ್, ಹುರುಳಿಯಲ್ಲಿ ಐದು, ಎಂಟು ದೀಪ, ಪೆನ್ ಸ್ಟ್ಯಾಂಡ್ ದೀಪ, ಬಾಸಿಂಗ ದೀಪ ಹೀಗೆ ಸಾಕಷ್ಟು ದೀಪಗಳನ್ನು ತಯಾರಿಸಿತ್ತಾರೆ. ಇದಕ್ಕೆ ಜನರ ಪ್ರತಿಕ್ರಿಯೆ ಚೆನ್ನಾಗಿದ್ದು, ಬೇಡಿಕೆಯಷ್ಟು ಪೂರೈಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಶಿವಕುಮಾರ್.
ಮಾಡಿದ್ದು ಸ್ನಾತಕೋತ್ತರ ಪದವಿ, ಬದುಕು ಕಟ್ಟಿಕೊಂಡಿದ್ದು ಹಣತೆ ತಯಾರಿಕೆಯಲ್ಲಿ:ಶಿವಕುಮಾರ್ ಅವರು ಬಾಲ್ಯದಿಂದಲೇ ಕುಂಬಾರಿಕೆ ನೋಡಿಕೊಂಡು ಬೆಳೆದವರು. ಜೇಡಿ ಮಣ್ಣಿನಲ್ಲಿ ಮಡಿಕೆ, ಕುಡಿಕೆ, ಸಣ್ಣ ದೀಪ ತಯಾರಿಸುತ್ತಿದ್ದ ಇವರು, ಕಾಲ ಬದಲಾದಂತೆ ಬಿಡದಿಯ ಜೋಗರಟ್ಟಿಯ ಕೆನರಾ ಬ್ಯಾಂಕ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ನಲ್ಲಿ ಡಿಸೈನಿಂಗ್ ಕುರಿತು ತರಬೇತಿ ಪಡೆದರು. ಅಲ್ಲದೆ ಆಯಿಷಾ ಎಂಬ ಮಹಿಳೆಯ ಸಹಾಯದಿಂದ ದಾವಣಗೆರೆಯ ದೃಶ್ಯಕಲಾ ಕಾಲೇಜಿನಲ್ಲಿ ಬಿವಿಎ, ಎಂಪಿಎ ಪದವಿ ಪಡೆದು ಹಳೇ ಕಾಲದ ಕಸುಬಿಗೆ ಆಧುನಿಕ ಟಚ್ ನೀಡಿ, ಅದರಲ್ಲೇ ಬದುಕು ಕಟ್ಟಿಕೊಂಡಿದ್ದಾರೆ.