ಕರ್ನಾಟಕ

karnataka

ETV Bharat / state

ಸಂಚಾರ ದಟ್ಟಣೆ ನಿರ್ವಹಣೆ: ಡ್ರೋಣ್ ಕ್ಯಾಮೆರಾಗಳ ಬಳಕೆಗೆ ಮುಂದಾದ ಪೊಲೀಸರು - drone cameras

ಸಂಚಾರ ದಟ್ಟಣೆ ನಿರ್ವಹಣೆಗೆ ಡ್ರೋಣ್ ಕ್ಯಾಮೆರಾಗಳನ್ನು ಬಳಕೆ ಮಾಡಲು ಪೊಲೀಸರು ಮುಂದಾಗಿದ್ದಾರೆ.

ಸಂಚಾರ ದಟ್ಟಣೆ ನಿರ್ವಹಣೆ  ಡ್ರೋಣ್ ಕ್ಯಾಮೆರಾ  drone cameras  manage Traffic congestion
ಸಂಚಾರ ದಟ್ಟಣೆ ನಿರ್ವಹಣೆ ಡ್ರೋಣ್ ಕ್ಯಾಮೆರಾಗಳ ಬಳಕೆಗೆ ಮುಂದಾದ ಪೊಲೀಸರು

By ETV Bharat Karnataka Team

Published : Feb 3, 2024, 1:24 PM IST

Updated : Feb 6, 2024, 5:26 PM IST

ಸಂಚಾರ ದಟ್ಟಣೆ ನಿರ್ವಹಣೆ: ಡ್ರೋನ್​ ಕ್ಯಾಮೆರಾ

ಬೆಂಗಳೂರು:ನಗರದಲ್ಲಿನ ಸಂಚಾರ ದಟ್ಟಣೆ ನಿರ್ವಹಣೆ ಹಾಗೂ ನಿಯಂತ್ರಣಕ್ಕೆ ಸಂಚಾರಿ ಪೊಲೀಸರು ಡ್ರೋಣ್ ಕ್ಯಾಮೆರಾಗಳ ಮೊರೆ ಹೋಗಿದ್ದಾರೆ. ಅವುಗಳ ಮೂಲಕ ನಗರದ ಪ್ರಮುಖ ಸ್ಥಳಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ಪೊಲೀಸರು ಮುಂದಾಗಿದ್ದಾರೆ.

ನಗರದಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಟೋಯಿಂಗ್ ವ್ಯವಸ್ಥೆ ಹಿಂಪಡೆದಿರುವ ಕಾರಣದಿಂದ ಎಲ್ಲೆಂದರಲ್ಲಿ ವಾಹನ ನಿಲ್ಲಿಸಲಾಗುತ್ತಿದೆ. ಅಲ್ಲದೇ ನಗರದ ಕೆಲವು ಮುಖ್ಯ ಜಂಕ್ಷನ್​ಗಳಲ್ಲಿ ಸಿಗ್ನಲ್​ಗಳ ನಿರ್ವಹಣೆ ಕುರಿತು ಗೊಂದಲಗಳಾಗುತ್ತಿವೆ. ಇದರಿಂದಾಗಿ ಆಂಬ್ಯುಲೆನ್ಸ್​​ ಮತ್ತಿತರ ತುರ್ತು ವಾಹನಗಳು ಸಮಸ್ಯೆಗೊಳಗಾಗುತ್ತಿವೆ. ಆದ್ದರಿಂದ ಸಂಚಾರ ಪೊಲೀಸರ ಗೊಂದಲ ಹಾಗೂ ವೈಫಲ್ಯಗಳನ್ನು ಪರಿಹರಿಸಲು ಡ್ರೋಣ್ ಕ್ಯಾಮೆರಾಗಳು ಸಹಾಯ ಮಾಡಲಿವೆ.

ಡ್ರೋಣ್ ಕ್ಯಾಮೆರಾದ ವಿಡಿಯೋಗಳನ್ನ ಸಂಚಾರಿ‌ ಪೊಲೀಸ್ ನಿಯಂತ್ರಣ ಕೋಣೆಯಲ್ಲಿ ಗಮನಿಸುವುದರಿಂದ ಎಲ್ಲೆಲ್ಲಿ ಸಂಚಾರ ದಟ್ಟಣೆಯಿದೆ. ಯಾವುದಾದರೂ ವಾಹನಗಳು ಕೆಟ್ಟು ನಿಂತಿವೆಯಾ, ಅಪಘಾತ ಸಂಭವಿಸಿದೆಯಾ ಎಂಬುದನ್ನು ತಿಳಿದುಕೊಂಡು ಸಂಬಂಧಪಟ್ಟ ಠಾಣೆಗಳಿಗೆ ಮಾಹಿತಿ ನೀಡಬಹುದು. ತಕ್ಷಣ ಸ್ಥಳಕ್ಕೆ ತೆರಳಿ ವಾಹನ ಸವಾರರ ಸಮಸ್ಯೆಯನ್ನು ಬಗೆಹರಿಸಬಹುದು. ಸದ್ಯ ಪ್ರಾಯೋಗಿಕವಾಗಿ ಪ್ರಮುಖ ಜಂಕ್ಷನ್‌ಗಳಲ್ಲಿ ಡ್ರೋಣ್ ಕ್ಯಾಮೆರಾಗಳು ಹಾರಾಡುತ್ತಿವೆ. ಮುಂದಿನ ದಿನಗಳಲ್ಲಿ ನಿರಂತರವಾಗಿ ಪ್ರಮುಖ ಜಂಕ್ಷನ್​ಗಳ ಮೇಲೆ ಡ್ರೋಣ್ ಕ್ಯಾಮೆರಾಗಳ ಮೂಲಕ ಸಂಚಾರಿ ಪೊಲೀಸರು ಕಣ್ಣಿಡಲಿದ್ದಾರೆ.

ಹೆಬ್ಬಾಳ, ಸೆಂಟ್ರಲ್ ಸಿಲ್ಕ್ ಬೋರ್ಡ್, ಇಬ್ಬಲೂರು ಜಂಕ್ಷನ್, ಮಾರತಳ್ಳಿ, ಕೆ.ಆರ್.ಪುರಂ, ಗೊರಗುಂಟೆಪಾಳ್ಯ, ಸಾರಕ್ಕಿ ಸೇರಿದಂತೆ ಸಂಚಾರ ದಟ್ಟಣೆಯಿರುವ ನಗರದ 8ಕ್ಕೂ ಅಧಿಕ ಸ್ಥಳಗಳಲ್ಲಿ ಡ್ರೋಣ್ ಕ್ಯಾಮೆರಾಗಳನ್ನ ಬಳಸಲಾಗುತ್ತಿದೆ. ಇದರಿಂದ ಅತಿಯಾದ ಟ್ರಾಫಿಕ್ ಜಾಮ್ ಎಲ್ಲೆಲ್ಲಿ ಉಂಟಾಗಿದೆ ಮತ್ತು ಕಾರಣವೇನು ಎಂಬುದನ್ನ ತಿಳಿದುಕೊಳ್ಳಬಹುದು. ಮತ್ತು ಟ್ರಾಫಿಕ್ ಜಾಮ್ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಪೊಲೀಸರಿಗೆ ಸಹಾಯವಾಗುತ್ತದೆ ಎಂದು ಸಂಚಾರಿ ಪೊಲೀಸ್ ಸಿಬ್ಬಂದಿಯೊಬ್ಬರು ವಿವರಿಸಿದ್ದಾರೆ.

ಇತ್ತೀಚಿನ ಮಾಹಿತಿ, ರಾಜ್ಯದ 1,054 ಪೊಲೀಸ್ ಠಾಣೆಯಲ್ಲಿ ಸಿಸಿಟಿವಿ ಅಳವಡಿಕೆ:ರಾಜ್ಯದ ಎಲ್ಲ ಪೊಲೀಸ್ ಠಾಣೆಯೊಳಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಸುಪ್ರೀಂಕೋರ್ಟ್ 2020 ಡಿಸೆಂಬರ್​ ತಿಂಗಳಲ್ಲಿ ಹೊರಡಿಸಿದ್ದ ಆದೇಶದಂತೆ, ರಾಜ್ಯದಲ್ಲಿರುವ 1,054 ಪೊಲೀಸ್ ಠಾಣೆಗಳಲ್ಲಿ‌ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಕಾರ್ಯ ಪೂರ್ಣವಾಗಿದೆ. ಪೊಲೀಸ್ ಠಾಣೆಗಳಲ್ಲಿ‌ ಆರಕ್ಷಕರ ಕಾರ್ಯವೈಖರಿಯಲ್ಲಿ ಸುಧಾರಣೆ ಹಾಗೂ ಪಾರದರ್ಶಕತೆ ತರಲು ಬಂಧನದ ಅಧಿಕಾರ ಹೊಂದಿರುವ ಮತ್ತು ತನಿಖೆ ನಡೆಸುವ ಸಿಬಿಐ, ಜಾರಿ ನಿರ್ದೇಶಾನಾಲಯ (ಇ.ಡಿ) ಸೇರಿದಂತೆ ಎಲ್ಲಾ‌ ತನಿಖಾ ಸಂಸ್ಥೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು‌.

ಇದರಂತೆ ಕಳೆದ ವರ್ಷ ಜುಲೈನಲ್ಲಿ ಕೇಂದ್ರ ಗೃಹ ಸಚಿವಾಲಯವು ಎಲ್ಲ ರಾಜ್ಯಗಳಿಗೂ ಈ ಬಗ್ಗೆ ನಿರ್ದೇಶನ ಕೊಡಲಾಗಿತ್ತು. ಇದರ ಅನ್ವಯ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಕೆಲಸ ಪ್ರಾರಂಭ ಆಗಿತ್ತು.‌ ಇದೀಗ ರಾಜ್ಯದ ಕಾನೂನು‌ ಸುವ್ಯವಸ್ಥೆ, ಟ್ರಾಫಿಕ್, ಸೈಬರ್ ಹಾಗೂ‌‌ ಮಹಿಳಾ ಪೊಲೀಸ್ ಠಾಣೆ ಸೇರಿ ಒಟ್ಟು 1,054 ಪೊಲೀಸ್ ಠಾಣೆಗಳಲ್ಲಿ 4,216 ಸಿಸಿಟಿವಿ ಕ್ಯಾಮೆರಾಗಳ ಮೂಲಕ ಹದ್ದಿನ ಕಣ್ಣಿಡಲಾಗಿತ್ತು.

ಇದನ್ನೂ ಓದಿ:ಹಾವೇರಿ: ಪ್ರಯಾಣದ ವೇಳೆ ಮಕ್ಕಳ ಸುರಕ್ಷತಾ ಪರಿಕರಗಳ ಬಳಕೆ ಕುರಿತು ಅರಿವು ಕಾರ್ಯಕ್ರಮ

Last Updated : Feb 6, 2024, 5:26 PM IST

ABOUT THE AUTHOR

...view details