ಬೆಂಗಳೂರು: ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತ ನಟ ದರ್ಶನ್ ಸೇರಿದಂತೆ ಇತರೆ ಕೆಲವು ಆರೋಪಿಗಳ ಪರಿಚಿತರ ವಿಚಾರಣೆಗೆ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.
ದರ್ಶನ್‌ಗೆ 40 ಲಕ್ಷ ರೂ. ನೀಡಿದ್ದ ಮೋಹನ್ ರಾಜು, ಆರೋಪಿ ಪ್ರದೋಶ್ ಪರಿಚಿತ ಕಾರ್ತಿಕ್ ಪುರೋಹಿತ್ ಹಾಗೂ ಪವಿತ್ರಾ ಗೌಡ ಆಪ್ತೆ ಸಮಂತಾ ಅವರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲು ಪೊಲೀಸರು ಸಜ್ಜಾಗಿದ್ದಾರೆ.
ದರ್ಶನ್‌ಗೆ ಹಣ ನೀಡಿರುವ ಆರೋಪದಡಿ ಮೋಹನ್ ರಾಜು ಹಾಗೂ ಆರೋಪಿ ಪ್ರದೋಶ್ಗೆ ಆರ್ಥಿಕ ಸಹಾಯ ಮಾಡಿದ್ದ ಕಾರ್ತಿಕ್ ಪುರೋಹಿತ್ ಹಾಗೂ ಪವಿತ್ರಾ ಗೌಡರ ಆಪ್ತೆಯಾಗಿರುವ ಸಮಂತಾರ ಹೇಳಿಕೆಗಳನ್ನು ಪೊಲೀಸರು ದಾಖಲಿಸಲಿದ್ದಾರೆ. ಅಲ್ಲದೇ ದರ್ಶನ್ ಮನೆ ಕೆಲಸಗಾರರು ಹಾಗೂ ಆರೋಪಿ ವಿನಯ್ ಒಡೆತನದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಕೆಲಸಗಾರರ ಹೇಳಿಕೆ ಪಡೆಯಲು ತಯಾರಿ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಪವಿತ್ರಾ ಗೌಡ ಅಲ್ಲ, ನಾನು ದರ್ಶನ್ ಅವರ ನಿಜವಾದ ಧರ್ಮಪತ್ನಿ: ವಿಜಯಲಕ್ಷ್ಮೀ - Vijayalakshmi
ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಕೆಲಸಗಾರ ಚೇತನ್ ಗೌಡ, ದರ್ಶನ್ ಮನೆ ಕೆಲಸಗಾರರಾದ ಬಬುಲ್ ಖಾನ್, ಸುಶೀಲಮ್ಮ ಮತ್ತು ಅಮೀರ್ ಖಾನ್ ವಿಚಾರಣೆ ನಡೆಸಲು ಚಿಂತಿಸಲಾಗಿದೆ. ಇವರನ್ನು ಸಾಕ್ಷಿದಾರರು ಎಂದು ಪರಿಗಣಿಸಿ ಕಲಂ 160ರಡಿಯಲ್ಲಿ ಹೇಳಿಕೆ ದಾಖಲಿಸಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.