ಬೆಂಗಳೂರು:ಚಿತ್ರದುರ್ಗದ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕನ್ನಡ ಚಿತ್ರರಂಗದ ನಟ ದರ್ಶನ್ ಹಾಗೂ ಇತರರ ಅಸಲಿ ವಿಚಾರಣೆ ಇಂದಿನಿಂದ ಆರಂಭವಾಗಲಿದೆ. ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನನ್ನು ಬೆಂಗಳೂರಿಗೆ ಕರೆಯಿಸಿ, ಹಲ್ಲೆ ನಡೆಸಿ ಹತ್ಯೆ ಮಾಡಿರುವ ಆರೋಪ ದರ್ಶನ್ ಮತ್ತು ಅವರ ಸಹವರ್ತಿಗಳ ಮೇಲಿದೆ.
ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ 13 ಜನರನ್ನು ಬಂಧಿಸಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಕೆಲ ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಬಂಧಿತರನ್ನು ಸದ್ಯ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿದ್ದು, ಹತ್ಯೆಗೆ ಸಂಬಂಧಿಸಿದ ಮತ್ತಷ್ಟು ಸಾಕ್ಷ್ಯಗಳನ್ನು ಪೊಲೀಸರು ಕಲೆಹಾಕಲಿದ್ದಾರೆ.
ರೇಣುಕಾಸ್ವಾಮಿಯನ್ನು ಕರೆದೊಯ್ದ ಸ್ಥಳ, ಕೂಡಿ ಹಾಕಿ ಹಲ್ಲೆ ಮಾಡಿದ ಜಾಗ ಹಾಗೂ ಮೃತದೇಹ ಎಸೆದ ಸ್ಥಳಗಳಲ್ಲಿ ಆರೋಪಿಗಳನ್ನು ಕರೆದೊಯ್ದು ಪೊಲೀಸರು ಮಹಜರು ಮಾಡಲಿದ್ದಾರೆ. ಅಲ್ಲದೇ, ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಲು ಬಳಸಿದ ಆಯುಧಗಳನ್ನೂ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ.
ಇದೆಲ್ಲದರ ಜೊತೆಗೆ, ಆರೋಪಿಗಳ ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಡೇಟಾ ಸಂಗ್ರಹಣೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಮುಂದಿನ ಆರು ದಿನಗಳ ತನಿಖೆಯಲ್ಲಿ ಕೃತ್ಯದಲ್ಲಿ ಯಾರ್ಯಾರ ಪಾತ್ರ ಏನು? ಯಾವ್ಯಾವ ಆರೋಪಿಗಳು ಎಲ್ಲೆಲ್ಲಿ ಇದ್ದರು? ಎಂಬಿತ್ಯಾದಿ ವಿಚಾರಗಳ ಕುರಿತು ತನಿಖೆ ನಡೆಯಲಿದೆ.
ಇದನ್ನೂ ಓದಿ:ಕೊಲೆಗೀಡಾದ ರೇಣುಕಾಸ್ವಾಮಿ ಅಂತ್ಯಕ್ರಿಯೆ: ಪತ್ನಿ, ಪೋಷಕರ ಆಕ್ರೋಶ; ಚಿತ್ರದುರ್ಗದಲ್ಲಿ ಇಂದು ಪ್ರತಿಭಟನೆ - Renukaswamy Funeral