ಚಿತ್ರದುರ್ಗ:ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ನಗರದ ನಿವಾಸಿ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪೊಲೀಸರು ಗುರುವಾರ ರಾತ್ರಿ ಆರೋಪಿಯ ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ. ಚಿತ್ರದುರ್ಗ ನಗರದ ಎರಡು ಸ್ಥಳಗಳಲ್ಲಿ ಮಹಜರು ಕಾರ್ಯ ನಡೆದಿದೆ.
ಜನಸಂದಣಿ ಹಿನ್ನೆಲೆ ಹಾಗೂ ಮಾಧ್ಯಮದವರ ಕಣ್ತಪ್ಪಿಸಿ, ರಾತ್ರಿ ವೇಳೆ ಪೊಲೀಸರು ಮಹಜರು ನಡೆಸಿದ್ದಾರೆ. ಸಿಪಿಐ ಸಂಜೀವ್ ಗೌಡ ನೇತೃತ್ವದಲ್ಲಿ ಆರೋಪಿ ರಾಘುನನ್ನು ಕರೆತಂದು ಸ್ಥಳ ಮಹಜರು ನಡೆಸಲಾಗಿದೆ. ಮಹಜರು ವೇಳೆ, ರೇಣುಕಾಸ್ವಾಮಿ ಕಿಡ್ನಾಪ್ ಬಗ್ಗೆ ಆರೋಪಿ ರಾಘು ಅಲಿಯಾಸ್ ರಾಘವೇಂದ್ರ ಮಾಹಿತಿ ನೀಡಿದ್ದಾನೆ. ರಾಘು ನಟ ದರ್ಶನ್ ಅಭಿಮಾನಿಗಳ ಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷನಾಗಿದ್ದಾನೆ. ಆರೋಪಿ ರಾಘು ಸಂಚು ರೂಪಿಸಿ, ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಬೆಂಗಳೂರಿನತ್ತ ಕರೆದೊಯ್ದಿದ್ದ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.