ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು, ನ್ಯಾಯಾಲಯದ ಅನುಮತಿ ಮೇರೆಗೆ ನಟ ದರ್ಶನ್ ವಿಶ್ರಾಂತಿ ಪಡೆಯಲು ಮೈಸೂರಿನಲ್ಲಿರುವ ತಮ್ಮ ಫಾರ್ಮ್ ಹೌಸ್ಗೆ ತೆರಳಿದ್ದಾರೆ. "ಹತ್ಯೆ ಪ್ರಕರಣದಲ್ಲಿ 7 ಮಂದಿ ಆರೋಪಿಗಳಿಗೆ ಜಾಮೀನು ದೊರೆತಿದ್ದು, ಎಲ್ಲರೂ ಬಿಡುಗಡೆಯಾಗಿದ್ದಾರೆ. ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು" ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಹೇಳಿದರು.
"ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುತ್ತೇವೆ": ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ವೈಫಲ್ಯವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಆಯುಕ್ತರು, "ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುತ್ತೇವೆ. ಅಲ್ಲದೇ ಪ್ರಾಸಿಕ್ಯೂಷನ್ ವೈಫಲ್ಯ ಎಂಬುದು ವಿಚಾರಣೆ ಪೂರ್ಣಗೊಂಡ ಬಳಿಕ ನಿರ್ಧಾರವಾಗುತ್ತದೆ" ಎಂದರು.