ಬೆಂಗಳೂರು:ಸಿಂಥೆಟಿಕ್ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ವಿದೇಶಿ ಡ್ರಗ್ ಪೆಡ್ಲರ್ಗಳನ್ನು ಸಿಸಿಬಿಯ ಮಾದಕದ್ರವ್ಯ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ. ನೈಜೀರಿಯಾ ಮೂಲದ ಮಿಖಾಯಿಲ್ ಐಗ್ಬೆರೆ (35) ಹಾಗೂ ಅಗ್ವು ಇಜೆಕೈಲ್ ಒಸಿತಾ (32) ಬಂಧಿತರು.
ಆರೋಪಿತರಿಂದ 3 ಕೋಟಿ ಮೌಲ್ಯದ ವಿವಿಧ ಮಾದರಿಯ ಸಿಂಥೆಟಿಕ್ ಡ್ರಗ್ಸ್ ಜಪ್ತಿ ಮಾಡಲಾಗಿದೆ. 5 ವರ್ಷಗಳ ಹಿಂದೆ ವೈದ್ಯಕೀಯ ವೀಸಾ ಪಡೆದು ಭಾರತಕ್ಕೆ ಬಂದಿದ್ದ ಆರೋಪಿಗಳು, ಸೋಲದೇವನಹಳ್ಳಿಯ ಮನೆಯೊಂದರಲ್ಲಿ ವಾಸವಿದ್ದರು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಮುಂಬೈನಿಂದ ಬೆಂಗಳೂರಿಗೆ ಡ್ರಗ್ಸ್ ತರಿಸಿಕೊಂಡು ಸಂಗ್ರಹಿಸಿಟ್ಟುಕೊಂಡಿರುವ ಕುರಿತು ಮಾಹಿತಿ ಪಡೆದ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ, 1 ಕೆ.ಜಿ 520 ಗ್ರಾಂ ಎಂಡಿಎಂಎ ಕ್ರಿಸ್ಟಲ್ಸ್, 202 ಗ್ರಾಂ ಕೊಕೇನ್, 12 ಗ್ರಾಂ ಎಂಡಿಎಂಎ ಎಕ್ಸೆಟೆಸಿ ಪಿಲ್ಸ್ ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ವಿದೇಶಿ ಡ್ರಗ್ ಪೆಡ್ಲರ್ಗಳು (ETV Bharat) ಇದನ್ನೂ ಓದಿ:ಹನಿಟ್ರ್ಯಾಪ್ ಮಾಡಿ 2 ಕೋಟಿಗೂ ಅಧಿಕ ಹಣ ವಸೂಲಿ ಆರೋಪ: ಮೂವರು ಆರೋಪಿಗಳ ಬಂಧನ
318 ಕೆ.ಜಿ ಗಾಂಜಾ ವಶಕ್ಕೆ:ಇದೇ ವೇಳೆ, ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಮೂವರನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 3.25 ಕೋಟಿ ಮೌಲ್ಯದ 318 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಬಿ.ದಯಾನಂದ್ ತಿಳಿಸಿದ್ದಾರೆ.
ಕೇರಳ ಮೂಲದ ಅಚ್ಚು, ಬೆಂಗಳೂರಿನ ಜಮೀರ್ ಹಾಗೂ ಆತನ ಪತ್ನಿ ರೇಷ್ಮಾ ಬಂಧಿತರು. ಒಡಿಶಾ ಹಾಗೂ ಆಂಧ್ರಪ್ರದೇಶದ ಗಡಿ ಭಾಗಗಳಿಂದ ಗಾಂಜಾ ಖರೀದಿಸಿ ಕಾರಿನ ಮೂಲಕ ಬೆಂಗಳೂರಿಗೆ ತರಲಾಗುತ್ತಿತ್ತು. ಪ್ರಮುಖ ಆರೋಪಿಯಾಗಿರುವ ಅಚ್ಚು ವಿರುದ್ಧ ಕೇರಳದ ವಿವಿಧ ಠಾಣೆಗಳಲ್ಲಿ ಮಾದಕ ವಸ್ತು ಸರಬರಾಜು, ರಾಬರಿ, ಹತ್ಯೆ ಯತ್ನ ಮಾತ್ರವಲ್ಲದೇ ಮೂರು ಬಾರಿ ಗೂಂಡಾ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ:ಹೊಸ ವರ್ಷಾಚರಣೆ ಟಾರ್ಗೆಟ್: ಬೆಂಗಳೂರಿಗೆ ಆಮದಾಗುತ್ತಿದ್ದ 3.25 ಕೋಟಿ ಮೌಲ್ಯದ ಗಾಂಜಾ ಜಪ್ತಿ