ಬೆಂಗಳೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ತನ್ನ ವಿರುದ್ದ ದಾಖಲಾಗಿರುವ ಪ್ರಕರಣ ರದ್ದುಕೋರಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್, ಆದೇಶವನ್ನು ಕಾಯ್ದಿರಿಸಿದೆ.
ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಆದೇಶ ಕಾಯ್ದಿರಿಸಿತು. ಇದೇ ವೇಳೆ ಯಡಿಯೂರಪ್ಪ ಖುದ್ದು ಹಾಜರಿಗೆ ನೀಡಿದ್ದ ವಿನಾಯತಿಯನ್ನು ವಿಸ್ತರಿಸಿದೆ.
ಅರ್ಜಿಯ ವಿಚಾರಣೆ ವೇಳೆ ಬಿ.ಎಸ್.ಯಡಿಯೂರಪ್ಪ ಪರ ವಕೀಲರು, ಅರ್ಜಿದಾರರ ವಿರುದ್ಧ ಪೊಕ್ಸೋ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತ ಮಹಿಳೆ ನನಗೆ ಮೊಮ್ಮಗಳಿದ್ದಂತೆ, ನಾನು ನೋಡಿದೆ. ಬಹಳ ಒಳ್ಳೆಯ ಹುಡುಗಿ. ಏನಾದರೂ ಬೇಕಾದರೆ ಕೇಳಿ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಅಂಶ ವಿಡಿಯೋದಲ್ಲಿದ್ದು, ಇದನ್ನೇ ಆರೋಪವೆಂದು ಹೇಳಲಾಗಿದೆ.
ಆದರೆ, ಅಪ್ರಾಪ್ತೆಯೊಂದಿಗೆ ಮಾತನಾಡಿ ಪ್ರಕರಣದ ಕುರಿತು ಚೆಕ್ ಮಾಡಿರುವುದಾಗಿ ಮಾತ್ರ ಹೇಳಿದ್ದಾರೆ. ಯಾರನ್ನೂ ಕೊಠಡಿಯ ಒಳಗೆ ಕರೆದುಕೊಂಡು ಹೋಗಿಲ್ಲ ಎಂಬುದಾಗಿ ತನಿಖೆ ವೇಳೆ ಅರ್ಜಿದಾರರು ಸಹ ತಿಳಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.
ಅಲ್ಲದೆ, ಸಂತ್ರಸ್ತೆ ನೆರವು ಕೋರಿ ಬಂದಾಗ ಪೊಲೀಸ್ ಆಯುಕ್ತರನ್ನು ಭೇಟಿ ಮಾಡುವಂತೆ ತಿಳಿಸಿದ್ದೆ. ನಾನು ತಿಳಿಸಿದ ದಿನವೇ ಅವರು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ್ದಾರೆ. ಆದರೆ, ಅಲ್ಲಿ ಈ ಆರೋಪದ ಅಂಶವನ್ನು ತಿಳಿಸಿಲ್ಲ. ಈ ಸಂಬಂಧ ಅರ್ಜಿದಾರರು ಪೊಲೀಸ್ ಆಯುಕ್ತರಿಗೂ ಕರೆ ಮಾಡಿ ಮಾತನಾಡಿದ್ದಾರೆ. ಒಂದೂವರೆ ತಿಂಗಳ ನಂತರ ದೂರು ದಾಖಲಿಸಲಾಗಿದೆ. ಇದಾದ ನಂತರದ ಬೆಳವಣಿಗೆ ಅನುಮಾನಗಳಿಗೆ ಕಾರಣವಾಗಲಿದೆ. ಈ ನಡುವಳಿಕೆಯನ್ನೂ ಪರಿಗಣಿಸಬೇಕು ಎಂದು ಪೀಠಕ್ಕೆ ತಿಳಿಸಿದರು.
ಈ ವೇಳೆ ಪೀಠ, ದೂರುದಾರರು ಸಾಯುವವರೆಗೂ ಅರ್ಜಿ ಸಲ್ಲಿಕೆಗೆ ಕಾಯಲಾಗುತ್ತಿತ್ತು ಎಂಬುದಾಗಿ ತನಿಖಾಧಿಕಾರಿಗಳು ಆರೋಪಿಸಿದ್ದಾರೆಯೇ ಎಂದು ಪೀಠ ಪ್ರಶ್ನಿಸಿತು. ಇದಕ್ಕೆ ವಕೀಲರು, ಅರ್ಜಿದಾರರು ಯಾವಾಗ ಸಾಯುತ್ತಾರೆ ಎಂಬ ಅಂಶ ನಮಗೆ ಕನಸು ಬಂದಿರಲಿಲ್ಲ. ತಾವು ಜಾದೂ ಮಾಡುವವರಲ್ಲ ಎಂದು ತಿಳಿಸಿದರು.
ಈ ವೇಳೆ ಪೀಠ, ಮೊಬೈಲ್ ರೆಕಾರ್ಡಿಂಗ್ನಲ್ಲಿ ಅರ್ಜಿದಾರರ ಧ್ವನಿ ಸಂಗ್ರಹವಾಗಿದೆ ಎಂದು ತಿಳಿಸಿತು. ಇದಕ್ಕೆ ವಕೀಲರು, ಆ ರೆಕಾರ್ಡಿಂಗ್ನಲ್ಲಿರುವ ಹೇಳಿಕೆ ಡಿಸ್ಟರ್ಬಿಂಗ್ ಆಗಿವೆ. ಅರ್ಜಿದಾರರ ಮನೆಗೆ ಫಿರ್ಯಾದಿ ಮಹಿಳೆ ಪದೇ ಪದೆ ಬಂದು ಹೋಗಿದ್ದಾರೆ. ಈ ಘಟನೆ ನಡೆದ ನಂತರ ಪದೇ ಪದೆ ಬರಲು ಸಾಧ್ಯವೇ? ಜತೆಗೆ, ಈ ಹಿಂದೆ 56 ದೂರುಗಳನ್ನು ನೀಡಿರುವ ಹಿನ್ನೆಲೆಯಲ್ಲಿ ಇದೆ . ಈ ಅಂಶವನ್ನು ಪರಿಗಣಿಸಬೇಕು. ಆರೋಪಪಟ್ಟಿಯಲ್ಲಿನ ಅಂಶಗಳೇ ಸಂಪೂರ್ಣ ಸತ್ಯವೆಂದು ತಿಳಿಯಬಾರದು ಎಂದು ವಾದ ಮಂಡಿಸಿದರು.
ಈ ಸಂದರ್ಭದಲ್ಲಿ ಪೀಠ, ಸಿಆರ್‌ಪಿಸಿ ಸೆಕ್ಷನ್ 161ರ ಅಡಿಯಲ್ಲಿ ದಾಖಲಿಸಿರುವ ಹೇಳಿಕೆಯನ್ನು ನಂಬಲಾಗುವುದಿಲ್ಲ. ಎರಡೂ ಕಡೆಯ ವಾದವನ್ನು ಪರಿಗಣಿಸಿ ಆದೇಶ ನೀಡುವುದಾಗಿ ತಿಳಿಸಿತು.
ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರೋ.ರವಿವರ್ಮ ಕುಮಾರ್, ಘಟನೆ ನಡೆದ ಸಂದರ್ಭದಲ್ಲಿ ಅರ್ಜಿದಾರರ ಮನೆಯ ಪ್ರವೇಶದಲ್ಲಿರುವ ರಿಜಿಸ್ಟರ್ ಅನ್ನು ತಿರುಚಲಾಗಿದೆ. ದೂರುದಾರರು ಮತ್ತು ಸಂತ್ರಸ್ತೆ ಬಂದ ಸಮಯ ಬದಲಿಸಲಾಗಿದೆ. ಆರೋಪಿಗಳು ಫಿರ್ಯಾದಿ ಒತ್ತಾಯದಿಂದ ಫೇಸ್ಬುಕ್ನಲ್ಲಿದ್ದ ವಿಡಿಯೋ ಡಿಲೀಟ್ ಮಾಡಿದ್ದಾರೆ. ಅರ್ಜಿದಾರರನ್ನ ಮನೆಗೆ ಕರೆತಂದು ವಿಡಿಯೋ ಡಿಲೀಟ್ ಮಾಡಿದ್ದಾರೆ ಎಂದು ಪೀಠಕ್ಕೆ ವಿವರಿಸಿದರು. ವಾದ ಆಲಿಸಿದ ಪೀಠ, ಆದೇಶ ಕಾಯ್ದಿರಿಸಿತು.
ಇದನ್ನೂ ಓದಿ:ಯಡಿಯೂರಪ್ಪ ವಿರುದ್ಧ ಸಂಜ್ಞೆ ಪರಿಗಣಿಸುವಲ್ಲಿ ವಿಚಾರಣಾ ನ್ಯಾಯಾಲಯ ವಿವೇಚನೆ ಬಳಸಿಲ್ಲ : ಹೈಕೋರ್ಟ್ - HIGH COURT