ಕಲಬುರಗಿ: ಲೋಕಸಭಾ ಚುನಾವಣೆಗೆ ಕೌಂಟ್‌ಡೌನ್ ಶುರುವಾಗುತ್ತಲೇ ಪ್ರಧಾನಿ ಮೋದಿ ದಕ್ಷಿಣ ಭಾರತ ದಂಡಯಾತ್ರೆ ಕೈಗೊಂಡಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಪ್ರಧಾನಿ ನಮೋ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರನಿಂದಲೇ ಚುನಾವಣೆ ಪಾಂಚಜನ್ಯ ಮೊಳಗಿಸಿದ್ದಾರೆ. ತಮ್ಮ ಗ್ಯಾರಂಟಿಗಳ ಮೂಲಕ ಕಾಂಗ್ರೆಸ್‌ನ ಗ್ಯಾರಂಟಿಗಳಿಗೆ ಟಕ್ಕರ್ ಕೊಡುವುದರ ಮೂಲಕ ಅಬ್ ಕೀ ಬಾರ್ ಚಾರ್ಸೋ ಪಾರ್ ಮಾಡಬೇಕೆಂದು ನಮೋ ಕರೆ ನೀಡಿದ್ದಾರೆ.
ಲೋಕ ಚುನಾವಣೆ ಹಿನ್ನೆಲೆ ಶನಿವಾರ ಕಲಬುರಗಿಗೆ ನಮೋ ಆಗಮಿಸಿದ್ದರು. ಮಧ್ಯಾಹ್ನ 2 ಗಂಟೆ 5 ನಿಮಿಷಕ್ಕೆ ಕಲಬುರಗಿ ಡಿಎಆರ್ ಹೆಲಿಪ್ಯಾಡ್‌ಗೆ ಆಗಮಿಸಿದ ಪ್ರಧಾನಿ ಮೋದಿ, ಡಿಎಆರ್ ಮೈದಾನದಿಂದ ಎನ್‌ವಿ ಕಾಲೇಜು ಮೈದಾನದವರೆಗೆ ಸುಮಾರು 15 ನಿಮಿಷಗಳ ಕಾಲ ರೋಡ್ ಶೋ ನಡೆಸಿದ್ರು. ಮೋದಿ ರೋಡ್ ಶೋ ನೋಡಲು ದಾರಿಯುದ್ದಕ್ಕೂ ಸುಡು ಬಿಸಿಲ್ಲನ್ನು ಲೆಕ್ಕಿಸದೇ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಇದೇ ವೇಳೆ ನಮೋ ಕಮಲದ ಹೂವನ್ನು ಪ್ರಧಾನಿ ಪ್ರದರ್ಶಿಸಿದರು.
ರೋಡ್‌ಶೋ ನಂತರ 2.30 ಕ್ಕೆ ನಗರದ ಎನ್ ವಿ ಕಾಲೇಜು ಮೈದಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದರು. ವೇದಿಕೆಗೆ ನಮೋ ಆಗಮಿಸುತ್ತಿದ್ದಂತೆ ನೆರದಿದ್ದ ಜನರು ಮೋದಿ ಮೋದಿಯೆಂದು ಘೋಷಣೆ ಕೂಗಿ ಸ್ವಾಗತಿಸಿದ್ರು. ಇದೇ ವೇಳೆ ಮಾತನಾಡಿದ ಪ್ರಧಾನಿ ಮೋದಿ, ವಿಶ್ವಗುರು ಬಸವೇಶ್ವರರು/ಕಲಬುರಗಿಯ ಶರಣಬಸವೇಶ್ವರರನ್ನ ಕನ್ನಡದಲ್ಲೆ ನೆನೆದರು. ದೇಶವು ತನ್ನ ಸಂಕಲ್ಪ ಪೂರ್ಣಗೊಳಿಸುತ್ತಿದೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತೇನೆ. ಅಲ್ಲದೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರ, ಲೂಟಿ ಸರ್ಕಾರ ಎಂದು ತೀಕ್ಷ್ಣವಾಗಿ ತೀವ್ರ ವಾಗ್ದಾಳಿ ನಡೆಸಿದದರು. ಕಾಂಗ್ರೆಸ್ ಎಷ್ಟೇ ಬಾರಿ ಬಟ್ಟೆ ಬದಲಿಸಿದರು ಅದರ ಸಂಸ್ಕೃತಿ ಬದಲಾಗಲ್ಲ, ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಗುಡುಗಿದರು. ಮೋದಿ ತಮ್ಮ ಭಾಷಣವುದ್ದಕ್ಕೂ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ, ಕನ್ನಡಿಗರ ಭಾವನಾತ್ಮಕ ವಿಚಾರಗಳನ್ನ ಮೆಲುಕು ಹಾಕಿ ಮತಬೇಟೆ ನಡೆಸಿದರು.
ಜನರು ತೀರ್ಮಾನ ಮಾಡಿದ್ದಾರೆ, ಈ ಬಾರಿ ಬಿಜೆಪಿ ಸೀಟು 400 ದಾಟಲಿದೆ. ಈ ಬಿಸಿಲಿನಲ್ಲಿ ಎಷ್ಟು ಜನ ಬಂದಿದ್ದಾರೆ. ರೋಡ್ ಶೋನಲ್ಲಿ ನನಗೆ ಜನರು ಆಶೀರ್ವಾದ ಮಾಡಲು ಬಂದಿದ್ದೀರಿ. ಕಾಂಗ್ರೆಸ್ ನಾಯಕರೇ ಬಿಜೆಪಿಗೆ ಈ ಬಾರಿ 400 ಪ್ಲೇಸ್ ಸೀಟುಗಳು ಬರುತ್ತವೆ ಎಂದು ಹೇಳುತ್ತಿದ್ದಾರೆ ಎಂದರು.