ಕರ್ನಾಟಕ

karnataka

ETV Bharat / state

ಅರಮನೆ ಮೈದಾನ, ಚಿಕ್ಕಬಳ್ಳಾಪುರದಲ್ಲಿ ಇಂದು ಮೋದಿ ಕಾರ್ಯಕ್ರಮ: ಮಹಿಳೆಯರಿಗೆ ವಿಶೇಷ ಆಸನ ವ್ಯವಸ್ಥೆ - PM Modi Campaign

ಲೋಕಸಭೆ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಬೆಂಗಳೂರಿನ ಅರಮನೆ ಮೈದಾನ ಮತ್ತು ಚಿಕ್ಕಬಳ್ಳಾಪುರ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಲಿದ್ದಾರೆ.

Etv Bharat
Etv Bharat

By ETV Bharat Karnataka Team

Published : Apr 19, 2024, 9:43 PM IST

Updated : Apr 20, 2024, 6:26 AM IST

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿರುವ ಕ್ಷೇತ್ರಗಳಲ್ಲಿ ಇಂದು (ಶನಿವಾರ) ಆಯೋಜಿಸಿರುವ ಕಾರ್ಯಕ್ರಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಅರಮನೆ ಮೈದಾನದ ಗಾಯತ್ರಿ ವಿಹಾರ ಗೇಟ್ ನಂ.4ರಲ್ಲಿ ನಡೆಯಲಿರುವ ನರೇಂದ್ರ ಮೋದಿ ಅವರ ಸಾರ್ವಜನಿಕ ಸಭೆಯ ಕರ್ಟನ್ ರೈಸರ್ ಕಾರ್ಯಕ್ರಮದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು.

ಬೃಹತ್ ಸಮಾವೇಶಕ್ಕೆ ಸಿದ್ಧತೆ

ಮಧ್ಯಾಹ್ನ ಮೊದಲು ಚಿಕ್ಕಬಳ್ಳಾಪುರ ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗಲಿದ್ದು, ಬಳಿಕ ಅರಮನೆ ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ಭಾಗವಹಿಸುವರು. ಕಾರ್ಯಕ್ರಮಕ್ಕೆ ಬೃಹತ್ ವೇದಿಕೆ ನಿರ್ಮಿಸಿದ್ದು, 60 ಸಾವಿರಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಲಕ್ಷಕ್ಕೂ ಹೆಚ್ಚಿನ ಜನರು ಭಾಗವಹಿಸಲಿದ್ದಾರೆ ಎಂದರು.

ಕಾರ್ಯಕರ್ತರು ಮತ್ತು ಮತದಾರರ ಉತ್ಸಾಹ ಇಮ್ಮಡಿಯಾಗಲಿದೆ. ಮಹಿಳೆಯರಿಗೆ ವಿಶೇಷವಾದ ಆಸನ ವ್ಯವಸ್ಥೆ ಮಾಡಲಾಗಿದೆ. 15 ಸಾವಿರ ವಿಶೇಷ ಆಹ್ವಾನಿತರಿಗೆ ಪಾಸ್ ವ್ಯವಸ್ಥೆ ಮಾಡಿದ್ದೇವೆ. ಈ ಕಾರ್ಯಕ್ರಮ ಯಶಸ್ವಿ ಆಗಲಿದ್ದು, ರಾಜ್ಯಕ್ಕೆ ವಿಶೇಷ ಸಂದೇಶ ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಪ್ರತೀ ಚುನಾವಣೆಯಲ್ಲಿ ಮಂಗಳೂರು ಭೇಟಿ ತಪ್ಪಿಸಿಕೊಳ್ಳದ ಪ್ರಧಾನಿ ಮೋದಿ: ಕಾರಣವೇನು? - MODI MANGALURU VISITS

ದೇಶದ್ರೋಹಿಗಳಿಗೂ ರಕ್ಷಣೆ:ಹುಬ್ಬಳ್ಳಿಯಲ್ಲಿ ಯುವತಿ ಕೊಲೆ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಇಂಥ ಘಟನೆ ನಡೆದಾಗ ರಾಜ್ಯ ಸರ್ಕಾರದ ನಡವಳಿಕೆ, ಮುಖ್ಯಮಂತ್ರಿಗಳ ಮತ್ತು ಗೃಹ ಸಚಿವರ ಹೇಳಿಕೆಗಳನ್ನು ಗಮನಿಸಬೇಕು. ಹುಬ್ಬಳ್ಳಿಯಲ್ಲಿ ನಡೆದ ಬರ್ಬರ ಹತ್ಯೆಗೆ ವೈಯಕ್ತಿಕ ವಿಚಾರ ಕಾರಣ ಎಂದು ತೇಲಿಬಿಡುವ ಕೆಲಸವನ್ನು ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಮಾಡಿದ್ದು, ಎಲ್ಲೋ ಒಂದೆಡೆ ತುಷ್ಟೀಕರಣದ ರಾಜಕಾರಣ ದೇಶದ್ರೋಹಿಗಳಿಗೂ ರಕ್ಷಣೆ ಕೊಡುವಂತಿದೆ ಎಂದು ಟೀಕಿಸಿದರು.

ಹತ್ಯೆ ಮಾಡುವವರಿಗೆ ರಕ್ಷಣೆಯ ಗ್ಯಾರಂಟಿ:ಗ್ಯಾರಂಟಿಯ ಭರಾಟೆಯಲ್ಲಿ ದೇಶದ್ರೋಹಿಗಳಿಗೆ, ದರೋಡೆಕೋರರಿಗೆ, ಬರ್ಬರ ಹತ್ಯೆ ಮಾಡುವವರಿಗೂ ರಕ್ಷಣೆ ಕೊಡುವ ಗ್ಯಾರಂಟಿಯನ್ನು ಕೊಡುವಂತೆ ಕಾಣುತ್ತಿದೆ. ಇದನ್ನು ಹಗುರವಾಗಿ ತೆಗೆದುಕೊಳ್ಳುವ ವಿಚಾರವಲ್ಲ. ನಿನ್ನೆ ಒಂದೇ ದಿನದಲ್ಲಿ 8 ಹತ್ಯೆ ಪ್ರಕರಣಗಳು ನಡೆದಿವೆ. ಮಡಿಕೇರಿಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಕಾರು ಹಾಯಿಸಿದ್ದು, ಒಬ್ಬರ ಹತ್ಯೆಯಾಗಿದೆ. ಧಾರವಾಡದ ಘಟನೆ, ಗದಗದ ಘಟನೆ ಇದಕ್ಕೆ ಉದಾಹರಣೆ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು.

ಬೆಂಗಳೂರು ಗ್ರಾಮಾಂತರದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗುವುದು ನಡೆದಿದೆ. ಇದು ರಾಜ್ಯದೆಲ್ಲೆಡೆ ಸಾಮಾನ್ಯವಾಗಿದೆ. ರಾಜ್ಯದ ಸರ್ಕಾರವು ತುಷ್ಟೀಕರಣ ಮಾಡುತ್ತಿರುವುದೇ ಇದಕ್ಕೆ ಕಾರಣ. ದೇಶದ್ರೋಹಿಗಳಿಗೆ ಇದರಿಂದ ದೊಡ್ಡ ಶಕ್ತಿ ಕೊಟ್ಟಂತಾಗಿದೆ. ಕಾನೂನು, ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮಹಿಳೆಯರಿಗೆ ಸುರಕ್ಷತೆ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ. ಮುಖ್ಯಮಂತ್ರಿಗಳ ಬಾಯಲ್ಲಿ ಇಂಥ ಹೇಳಿಕೆ ಬಂದಿದೆ ಎಂದರೆ, ಇದನ್ನು ಪ್ರತಿಯೊಬ್ಬರೂ ಯೋಚಿಸಬೇಕು ಎಂದರು.

ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ.ರಾಮಮೂರ್ತಿ ಉಪಸ್ಥಿತರಿದ್ದರು.

ಇದನ್ನೂ ಓದಿ:'ತುಂಬಾ ಭಾವನಾತ್ಮಕ ಕ್ಷಣ': ಅಯೋಧ್ಯೆಯ ಬಾಲ ರಾಮನ ಸೂರ್ಯ ತಿಲಕದ ವಿಸ್ಮಯ ವೀಕ್ಷಿಸಿದ ಪ್ರಧಾನಿ ಮೋದಿ - Ram Lallas Surya Tilak

Last Updated : Apr 20, 2024, 6:26 AM IST

ABOUT THE AUTHOR

...view details