ಬೆಂಗಳೂರು: ಕೊರೊನಾ ಸೋಂಕಿನಿಂದ ಮೃತಪಟ್ಟಿರುವ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರ ಕುಟುಂಬ ಸದಸ್ಯರಿಗೆ ತಲಾ 30 ಲಕ್ಷ ರೂ. ಪರಿಹಾರ ನೀಡದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.
ದಾವಣಗೆರೆಯ ತಾಹೀರ್ ಹುಸೈನ್ ಮತ್ತು ರಾಯಚೂರಿನ ಅಜೀಜ್ ಪಾಷಾ ಜಾಗೀರದಾರ್ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ವಿ.ಕಾಮೇಶ್ವರ ರಾವ್ ಮತ್ತು ಎಸ್. ರಾಚಯ್ಯ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕೊರೊನಾ ಸಂದರ್ಭದಲ್ಲಿ ಸಾವನ್ನಪ್ಪಿದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ನೌಕರರಿಗೆ ಈವರೆಗೂ 30 ಲಕ್ಷ ಪರಿಹಾರ ನೀಡಿಲ್ಲ ಎಂದು ಪೀಠಕ್ಕೆ ವಿವರಿಸಿದರು. ಈ ಅಂಶ ದಾಖಲಿಸಿಕೊಂಡ ಪೀಠ, ಜನವರಿ 27ರಂದು ಅರ್ಜಿಯ ವಿಚಾರಣೆ ಮುಂದುವರೆಸುವುದಾಗಿ ತಿಳಿಸಿ ವಿಚಾರಣೆ ಮುಂದೂಡಿತು.
ಕೋವಿಡ್‌ನಿಂದ ಸಾರಿಗೆ ನೌಕರರು ಸಾವನ್ನಪ್ಪಿದ್ದರೆ, ಅವರ ಕುಟುಂಬಕ್ಕೆ ತಲಾ 30 ಲಕ್ಷ ಪರಿಹಾರ ಕಲ್ಪಿಸುವುದಾಗಿ ತಿಳಿಸಿ ಸಾರಿಗೆ ಇಲಾಖೆ 2021ರ ಫೆಬ್ರವರಿ 10ರಂದು ಸುತ್ತೋಲೆ ಹೊರಡಿಸಿತ್ತು. ಮಾಹಿತಿ ಹಕ್ಕು ಕಾಯಿದೆ ಅಡಿ ಪಡೆದ ಮಾಹಿತಿ ಪ್ರಕಾರ 2020ರ ಮಾರ್ಚ್‌ನಿಂದ 2021ರ ಜೂನ್‌ವರಗೆ ಕೊರೊನಾದಿಂದ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ 351 ನೌಕರರು ಮೃತಪಟ್ಟಿದ್ದಾರೆ ಎಂದು ವಿವರಿಸಲಾಗಿದೆ.