ಬೆಂಗಳೂರು: ಕೊಡಗು ಜಿಲ್ಲೆಯ ಅರಣ್ಯ ಜಮೀನು, ಸರ್ಕಾರಿ ಜಮೀನು, ಪಶ್ಚಿಮಘಟ್ಟ ಪ್ರದೇಶ ಹಾಗೂ ಬಾಣೆ, ಜಮ್ಮಾ, ಜಾಗೀರು, ಉಂಬಳಿ ಜಮೀನಿನ ಹಿಡುವಳಿದಾರರ ಜಮೀನುಗಳಲ್ಲಿನ ಮರಗಳನ್ನು ಕಡಿಯುವುದನ್ನು ನಿರ್ಬಂಧಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಂಬಂಧ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಸೋಮವಾರ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿತು.
ಮಡಿಕೇರಿ ನಿವಾಸಿ ಕೆ.ಎ.ರವಿ ಚೆಂಗಪ್ಪ ಹಾಗೂ ವಿರಾಜಪೇಟೆ ನಿವಾಸಿ ಸಿ.ಸಿ.ದೇವಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠ ನಡೆಸಿತು.
ಈ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಕೊಡಗು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕೊಡಗು ಜಿಲ್ಲಾಧಿಕಾರಿಗೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ಸೂಚಿಸಿದೆ.
ಮುಂದಿನ ವಿಚಾರಣೆವರೆಗೂ ಯಾವುದೇ ಮರಗಳನ್ನು ಕಡಿಯದಿದ್ದರೆ ಅದರ ಮಾಹಿತಿಯನ್ನು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ಇದೇ ವೇಳೆ ನ್ಯಾಯಪೀಠ ತಿಳಿಸಿದೆ.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಜಮ್ಮಾ-ಬಾಣೆ, ಉಂಬಳಿ, ಜಾಗೀರು ಹಾಗೂ ಇತರೆ ಜಮೀನುಗಳಿಗೆ 'ಪರಾಧೀನ ಜಮೀನು' ಎಂದು ನಮೂದಿಸಿ ಆ ಜಮೀನಿನಲ್ಲಿರುವ ಲಕ್ಷಾಂತರ ಮರಗಳನ್ನು ಅವ್ಯಾಹತವಾಗಿ ಕಡಿಯಲಾಗುತ್ತಿದೆ. ಮರ ಕಡಿಯುವ ಸಂಬಂಧ ಈಗಾಗಲೇ ಹತ್ತಾರು ಆದೇಶಗಳನ್ನು ಹೊರಡಿಸಲಾಗಿದೆ. ಪರಾಧೀನ ಜಮೀನು ಎಂಬ ಪದ ಭೂ ಕಂದಾಯ ಕಾಯ್ದೆಯಲ್ಲೂ ಇಲ್ಲ, ಸರ್ಕಾರದ ಯಾವ ಅಧಿಸೂಚನೆಗಳಲ್ಲೂ ಈ ಪದ ಬಳಕೆ ಮಾಡಿಲ್ಲ. ಇದರ ಹಿಂದೆ ಜಿಲ್ಲೆಯ ಟಿಂಬರ್ ಮಾಫಿಯಾ ಕೆಲಸ ಮಾಡುತ್ತಿದೆ. ಮರಗಳನ್ನು ಕಡಿಯುವುದಕ್ಕೆ ಬಿಟ್ಟರೆ ಇತ್ತೀಚಿಗೆ ಕೇರಳದ ವಯನಾಡ್‌ನಲ್ಲಿ ಸಂಭವಿಸಿದಂತೆ ಕೊಡಗು ಜಿಲ್ಲೆಯಲ್ಲೂ ಭೂಕುಸಿತ ಆಗಬಹುದು. 2018ರಲ್ಲಿ ಜಿಲ್ಲೆಯಲ್ಲಿ ನಡೆದ ಭೂಕುಸಿತಕ್ಕೆ ಮರಗಳನ್ನು ಕಡಿದಿರುವುದೇ ಕಾರಣ. ಹಾಗಾಗಿ, ಕೊಡಗು ಉಳಿಸಬೇಕಾಗಿದೆ. ಆದ್ದರಿಂದ ಮರಗಳನ್ನು ಕತ್ತರಿಸಿದಂತೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ:ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಉತ್ತರ ಕನ್ನಡಕ್ಕೆ ರೆಡ್, ಇತರ 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ - Karnataka Rain Forecast