ಬೆಂಗಳೂರು:ಧಾರ್ಮಿಕ ಕಟ್ಟಡಗಳ ಸ್ವರೂಪ ಪ್ರಶ್ನಿಸಿ ದಾಖಲಾದ ಪ್ರಕರಣಗಳ ಸಂಬಂಧ ಅಸ್ತಿತ್ವದಲ್ಲಿರುವ ಧಾರ್ಮಿಕ ಕಟ್ಟಡಗಳ ಕುರಿತಾಗಿ ಯಾವುದೇ ಆದೇಶ ನೀಡದಂತೆ, ಇಲ್ಲವೇ ಸಮೀಕ್ಷೆ ನಡೆಸಲು ಆದೇಶಿಸದಂತೆ ಸುಪ್ರೀಂಕೋರ್ಟ್ ಡಿಸೆಂಬರ್ 12ರಂದು ಆದೇಶಿಸಿದೆ ಎಂದು ಕೇಂದ್ರ ಸರ್ಕಾರ ಹೈಕೋರ್ಟ್‌ಗೆ ವಿವರಿಸಿದೆ.
ಈ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಾಲಯವನ್ನು ಧ್ವಂಸ ಮಾಡಿ ಜಾಮಿಯಾ ಮಸೀದಿ ನಿರ್ಮಾಣ ಮಾಡಲಾಗಿದ್ದು, ಉತ್ಖನನ ಮಾಡಬೇಕು ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಪೀಠವು ಮುಂದೂಡಿತು.
ವಿಚಾರಣೆ ವೇಳೆ, ಕೇಂದ್ರ ಸರ್ಕಾರದ ಪರ ವಕೀಲರು, ''ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ನಮಗೆ ಕಾಲಾವಕಾಶ ಬೇಕಿದೆ. ಬಹು ಹಿಂದೆ ನಿರ್ಮಾಣವಾಗಿರುವ ಕಟ್ಟಡದ ಸಮೀಕ್ಷೆ ನಡೆಸಬೇಕು ಎಂದು ಅರ್ಜಿದಾರರು ಬಯಸುತ್ತಿದ್ದಾರೆ. ಅಶ್ವಿನಿ ಉಪಾಧ್ಯಾಯ ಪ್ರಕರಣದಲ್ಲಿ ಧಾರ್ಮಿಕ ಕಟ್ಟಡಗಳ ಸ್ವರೂಪ ಪ್ರಶ್ನಿಸಿ ದಾಖಲಾದ ದಾವೆಗಳಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಧಾರ್ಮಿಕ ಕಟ್ಟಡಗಳ ಕುರಿತಾಗಿ ಯಾವುದೇ ಆದೇಶ ನೀಡದಂತೆ ಇಲ್ಲವೇ ಸಮೀಕ್ಷೆ ನಡೆಸಲು ಆದೇಶಿಸದಂತೆ ಸುಪ್ರೀಂಕೋರ್ಟ್ ಡಿಸೆಂಬರ್ 12ರಂದು ಆದೇಶಿಸಿದೆ'' ಎಂದು ವಿವರಿಸಿದರು.
ರಾಜ್ಯ ಸರ್ಕಾರದ ಪರ ವಕೀಲರು, ''ಜುಮ್ಮಾ ಮಸೀದಿಗೆ ಸೇರಿಕೊಂಡಂತಿರುವ ಮದರಸಾಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಇಂಥದ್ದೇ ಪ್ರಕರಣವನ್ನು ಫೆಬ್ರವರಿ 17ಕ್ಕೆ ನ್ಯಾಯಾಲಯ ವಿಚಾರಣೆಗೆ ನಿಗದಿಪಡಿಸಿದೆ. ಅಂದೇ ಈ ಅರ್ಜಿಯನ್ನೂ ವಿಚಾರಣೆ ನಡೆಸಬೇಕು'' ಎಂದು ಕೋರಿದರು.