ಕರ್ನಾಟಕ

karnataka

ETV Bharat / state

ಖಾಸಗಿ ಕ್ಷೇತ್ರದಲ್ಲಿ ಸ್ಥಳೀಯರಿಗೆ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ - Job Reservation For Locals - JOB RESERVATION FOR LOCALS

ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಖಾಸಗಿ ವಲಯದಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಮೀಸಲಾತಿ ಕಲ್ಪಿಸುವ ಮಸೂದೆಯು ಸಂವಿಧಾನದ 19 (1) (ಡಿ), 19 1 (ಇ), ಜಿ ಮತ್ತು 14ನೇ ವಿಧಿಗಳಿಗೆ ವಿರುದ್ಧ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಹೈಕೋರ್ಟ್‌
ಹೈಕೋರ್ಟ್‌ (ETV Bharat)

By ETV Bharat Karnataka Team

Published : Jul 25, 2024, 8:11 AM IST

ಬೆಂಗಳೂರು: ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರೆ ಕ್ಷೇತ್ರಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ರಾಜ್ಯ ಸರ್ಕಾರದ ಮಸೂದೆಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ನಗರದ ಬಿಲೇಕಹಳ್ಳಿಯ ಸೋಮೇಶ್ವರ ಲೇಔಟ್‌ನ ಲೆಕ್ಕ ಪರಿಶೋಧಕಿ ಆರ್.ಅಮೃತಲಕ್ಷ್ಮಿ ಸಲ್ಲಿಸಿರುವ ಅರ್ಜಿ ಕುರಿತಂತೆ ವಕೀಲರು, ಇದೊಂದು ತುರ್ತು ವಿಚಾರ. ತಕ್ಷಣ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠವನ್ನು ಒತ್ತಾಯಿಸಿದರು. ಇದಕ್ಕೆ ನ್ಯಾಯಪೀಠ, ಆಗಸ್ಟ್ 7ಕ್ಕೆ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತು.

ಅರ್ಜಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಮಸೂದೆಯು ಸಂವಿಧಾನದ 19 (1) (ಡಿ), 19 1 (ಇ), ಜಿ ಮತ್ತು 14ನೇ ವಿಧಿಗಳಿಗೆ ವಿರುದ್ಧವಾಗಿದೆ. ಈ ಮಸೂದೆ ಅನುಷ್ಠಾನಗೊಂಡಲ್ಲಿ ಸ್ವಾಭಾವಿಕ ನ್ಯಾಯತತ್ವಗಳ ಉಲ್ಲಂಘನೆಯಾಗುತ್ತದೆ. ಇಂಥ ಕಾಯ್ದೆಯನ್ನು ಜಾರಿಗೊಳಿಸುವ ಅಧಿಕಾರ ರಾಜ್ಯ ಶಾಸನ ಸಭೆಗಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

ಒಂದು ವೇಳೆ ಜಾರಿಗೆ ಬಂದಲ್ಲಿ ರಾಜ್ಯದ ಕೈಗಾರಿಕಾ ವಲಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಲವು ಸಾಂವಿಧಾನಿಕ ಪ್ರಶ್ನೆಗಳು ಎದುರಾಗಲಿವೆ. ಕೆಟ್ಟ ಪರಂಪರೆಗೂ ಅವಕಾಶ ಮಾಡಿಕೊಡುತ್ತದೆ. ಹೀಗಾಗಿ ಉದ್ದೇಶಿತ ಮಸೂದೆಯನ್ನು ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.

ಇದನ್ನೂ ಓದಿ:ಕನ್ನಡಿಗರಿಗೆ ಮೀಸಲು ವಿಧೇಯಕದ ಬಗ್ಗೆ ಗೊಂದಲ ಇತ್ತು, ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ: ಸಿಎಂ ಸಿದ್ದರಾಮಯ್ಯ - Reservation for Kannadigas in job

ABOUT THE AUTHOR

...view details