ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಾರ್ಡ್ ಸಮಿತಿ ಹಾಗೂ ಪಂಚಾಯತ್‌ಗಳಲ್ಲಿ ವಾರ್ಡ್ ಸಭೆ/ಗ್ರಾಮ ಸಭೆಗಳನ್ನು ನಿಗದಿತ ಸಮಯದಲ್ಲಿ ನಡೆಸುವಂತೆ ನಿರ್ದೇಶನ ನೀಡಲು ಕೋರಿ ಸಲ್ಲಿಸಿರುವ ಅರ್ಜಿಯ ಸಂಬಂಧ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಕೇಳಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿಯ ಐಡಿಯಲ್ ಡೆಮಾಕ್ರಟಿಕ್ ಎಂಪವರ್‌ಮೆಂಟ್ ಅಸೋಸಿಯೇಷನ್ (ಐಡಿಯಾ) ಇದರ ಕಾರ್ಯದರ್ಶಿ ಅಂಜುಲಾ ವಿಶ್ವನಾಥ್ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠ, ಪೌರಾಡಳಿತ ನಿರ್ದೇಶನಾಲಯ, ಕರ್ನಾಟಕ ಪಂಚಾಯತ್‌ರಾಜ್ ಆಯುಕ್ತಾಲಯಕ್ಕೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿದೆ.
ಅರ್ಜಿಯಲ್ಲಿ, ಜಿಗಣಿ ಪುರಸಭೆಯಲ್ಲಿ ವಾರ್ಡ್ ಸಮಿತಿ ರಚನೆ ಆಗಿಲ್ಲ ಎಂದೂ ದೂರಲಾಗಿರುವ ಹಿನ್ನೆಲೆಯಲ್ಲಿ ಜಿಗಣಿ ಪುರಸಭೆ ಮುಖ್ಯಾಧಿಕಾರಿಗೂ ಕೋರ್ಟ್ ನೋಟಿಸ್ ಜಾರಿಗೊಳಿಸಿತು. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ನಾಟಕ ಪೌರನಿಗಮಗಳ ಕಾಯ್ದೆ-1964ರ ಸೆಕ್ಷನ್ 80-ಎಂ ಪ್ರಕಾರ ಪ್ರತಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಾರ್ಡ್ ಸಮಿತಿಗಳನ್ನು ರಚಿಸಿ, ಅವುಗಳ ಕಾರ್ಯನಿರ್ವಹಣೆ ಮಾಡುವುದು ಕಡ್ಡಾಯ.