ಹುಬ್ಬಳ್ಳಿ:ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯ ಚಾಮುಂಡೇಶ್ವರಿ ನಗರದಲ್ಲಿ ನಡೆದಿದೆ. ಮಗನ ಸಾವಿಗೆ ಆತನ ಪತ್ನಿಯ (ಸೊಸೆಯ) ಕಿರುಕುಳವೇ ಕಾರಣ ಎಂದು ಮೃತನ ಪೋಷಕರು ಆರೋಪಿಸಿದ್ದಾರೆ.
ಪೀಟರ್ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತನ ಹೆಂಡತಿ ಪಿಂಕಿ ಖಾಸಗಿ ಶಾಲಾ ಶಿಕ್ಷಕಿಯಾಗಿದ್ದರು. ಇವರಿಬ್ಬರ ನಡುವೆ ಕಳೆದ ಕೆಲ ದಿನಗಳಿಂದ ಜಗಳವಾಗುತ್ತಿತ್ತು. ಈ ನಡುವೆ, ಡೈವೋರ್ಸ್ಗಾಗಿ ಕೋರ್ಟ್ ಮೊರೆ ಹೋಗಿದ್ದರು ಎಂದು ಪೋಷಕರು ತಿಳಿಸಿದ್ದಾರೆ.
ಕಳೆದ ಏಳೆಂಟು ತಿಂಗಳುಗಳಿಂದ ದೂರವಾಗಿದ್ದ ಸೊಸೆ ಹೆಚ್ಚಿನ ಜೀವನಾಂಶಕ್ಕಾಗಿ ಕಿರುಕುಳ ನೀಡುತ್ತಿದ್ದಳು. ಇದರಿಂದಾಗಿಯೇ ಮಗ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ತಂದೆ-ತಾಯಿ ಆರೋಪ ಮಾಡಿದ್ದಾರೆ.
ಮೃತನ ತಂದೆಯ ಪ್ರತಿಕ್ರಿಯೆ (ETV Bharat) ''ಹೆಂಡತಿಯ ಕಿರುಕುಳದಿಂದಲೇ ನಮ್ಮ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮದುವೆಯಾಗಿ 2 ವರ್ಷ ಆಗಿತ್ತು. ಆತ ಸಾವಿನ ಕಾರಣ ತಿಳಿಸಿ ಪತ್ರ ಬರೆದಿಟ್ಟಿದ್ದು, ಅದನ್ನು ಪೊಲೀಸರು ತನಿಖೆಗೆಂದು ತೆಗೆದುಕೊಂಡು ಹೋಗಿದ್ದಾರೆ. ಮಗನ ಹೆಂಡತಿ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಳು. ಶಾಲೆಯಿಂದ ಮನೆಗೆ ಸಂಜೆ ತಡವಾಗಿ ಬರುತ್ತಿದ್ದಳು. ಕೇಳಿದರೆ ಜಗಳವಾಡುತ್ತಿದ್ದಳು. ಬಳಿಕ ಆಕೆಯು ಶಾಲೆಗೆ ಹೋಗುವುದನ್ನು ಅವರ ಸಹೋದರರೇ ಹೇಳಿ ಬಿಡಿಸಿದ್ದರು. ಏನೂ ಹೇಳದೇ ಕೇಳದೇ ತವರು ಮನೆಗೆ ಹೋಗಿಬಿಡುತ್ತಿದ್ದಳು. ಅಲ್ಲದೆ, ಡೈವೋರ್ಸ್ಗೋಸ್ಕರ ಕೋರ್ಟ್ಗೆ ಆರ್ಜಿ ಹಾಕಿದ್ದಳು. ಜೊತೆಗೆ, 20 ಲಕ್ಷ ರೂ. ಜೀವನಾಂಶ ನೀಡುವಂತೆ ಒತ್ತಾಯಿಸುತ್ತಿದ್ದಳು. ಕಳೆದ ಆರೇಳು ತಿಂಗಳಿಂದ ಮಗನಿಂದ ಆಕೆ ದೂರವಾಗಿದ್ದಳು. ಫೋನ್ ಕರೆಯಲ್ಲೇ ಕಿರುಕುಳ ನೀಡುತ್ತಿದ್ದಳು'' ಎಂದು ಮೃತ ಪತಿಯ ಪೀಟರ್ ತಂದೆ ಓಬಯ್ಯ ಆರೋಪಿಸಿದ್ದಾರೆ.
ಪತ್ನಿ ಕಿರುಕುಳದಿಂದ ಸಾವನ್ನಪ್ಪಿದ ಮಗನ ಸಾವಿಗೆ ನ್ಯಾಯ ಕೊಡಿಸುವಂತೆ ಪೋಷಕರು ಅಶೋಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಫೈನಾನ್ಸ್ ಕಾಟ ಆರೋಪ : ಶಾಲಾ ಶಿಕ್ಷಕಿ ಆತ್ಮಹತ್ಯೆ ಶಂಕೆ ; ಪೊಲೀಸರಿಗೆ ದೂರು ನೀಡಿದ ಪತಿ