ಕಾರವಾರ (ಉತ್ತರ ಕನ್ನಡ): ನೌಕಾನೆಲೆ ಯೋಜನೆಗಾಗಿ ತಮ್ಮ ಮನೆಮಠವನ್ನು ಕಳೆದುಕೊಂಡು ಎರಡು ದಶಕಗಳೇ ಕಳೆದು ಹೋಗಿದೆ. ಯೋಜನೆ ಆರಂಭವಾಗಿ ಇದೀಗ ಎರಡನೇ ಹಂತದ ಕಾಮಗಾರಿ ಕೂಡ ಪೂರ್ಣವಾಗುತ್ತಾ ಬಂದಿದೆ. ಆದರೆ ಯೋಜನೆಗಾಗಿ ನಿರಾಶ್ರಿತರಾದ ತಮಗೆ ಸೂಕ್ತ ಪರಿಹಾರ ದೊರೆಯದೇ ಇಂದಿಗೂ ಕಚೇರಿಗಳಿಗೆ ಅಲೆದಾಡುತ್ತಿದ್ದೇವೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.
ಕದಂಬ ನೌಕಾನೆಲೆ ದೇಶದ ಪ್ರತಿಷ್ಠಿತ ಯೋಜನೆಗಳಲ್ಲಿ ಒಂದು. ಏಷ್ಯಾದಲ್ಲಿಯೇ ಅತಿದೊಡ್ಡ ನೌಕಾನೆಲೆ ಎನ್ನುವ ಹೆಗ್ಗಳಿಕೆ ಕೂಡ ಪಡೆದಿದೆ. ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅರಗ ಗ್ರಾಮದಲ್ಲಿ ತಲೆ ಎತ್ತಿದ ಈ ಯೋಜನೆ ನಿರ್ಮಾಣಕ್ಕೆ ಸಾವಿರಾರು ಜನರು ತಮ್ಮ ಭೂಮಿಯನ್ನು ನೀಡಿದ್ದರು. ಹತ್ತಾರು ಗ್ರಾಮಗಳು ಯೋಜನೆ ವ್ಯಾಪ್ತಿಗೆ ಒಳಪಟ್ಟ ಕಾರಣ ಜನರನ್ನು ಬೇರೆಡೆ ಸ್ಥಳಾಂತರ ಮಾಡಲಾಗಿತ್ತು. ಆದರೆ ಭೂಮಿ ನೀಡಿದ್ದ ಸುಮಾರು ನೂರಾರು ಕುಟುಂಬಗಳಿಗೆ ಇಂದಿಗೂ ಸರಿಯಾದ ಪರಿಹಾರ ಬಂದಿಲ್ಲ. ಒಂದೆಡೆ, ಸೂಕ್ತ ಪರಿಹಾರ ಕೊಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದು, ಇನ್ನೊಂದೆಡೆ, ಯೋಜನೆಗೆ ಭೂಮಿ ನೀಡಿದವರಿಗೆ ಪರಿಹಾರ ಕೊಡಲು ಮಂಜೂರಾಗಿದ್ದ ಹಣವನ್ನು ಪಡೆಯಲು ನಿತ್ಯ ಕಚೇರಿಗೆ ಅಲೆದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಯೋಜನೆ ಪ್ರಾರಂಭದ ವೇಳೆ ಭೂಮಿ ನೀಡಿದವರಿಗೆ ಉದ್ಯೋಗ ಕೊಡುವುದಾಗಿ ಹೇಳಲಾಗಿತ್ತು. ಸದ್ಯ ಉದ್ಯೋಗವೂ ಇಲ್ಲದೇ, ಪರಿಹಾರವೂ ಸಿಗದೇ ಜನ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ.
ಇವರ ಮಾತು ನಂಬಿ ಸಾಲ ಮಾಡಿಕೊಂಡಿದ್ದು, ಇದೀಗ ಬಡ್ಡಿ ತೀರಿಸಲು ಸಾಧ್ಯವಾಗದ ಸ್ಥಿತಿ ಇದೆ. ಅಲ್ಲದೆ, ಪರಿಹಾರ ಬರುವ ನಂಬಿಕೆಯಲ್ಲಿದ್ದ ಅನೇಕರು ಸಾವನ್ನಪ್ಪಿದ್ದಾರೆ. ಭೂಮಿ ನೀಡಿದ ಸಂದರ್ಭದಲ್ಲಿ ಕಡಿಮೆ ಪರಿಹಾರ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಆಗ ಸುಪ್ರಿಂ ಕೋರ್ಟ್ ಗುಂಟೆಗೆ 11,500 ರೂ. ಹಾಗೂ ಇಷ್ಟು ದಿನಗಳ ಕಾಲದ ಬಡ್ಡಿ ನೀಡುವಂತೆ ಆದೇಶ ನೀಡಿತ್ತು. ನ್ಯಾಯಾಲಯದ ಮೊರೆ ಹೋಗಿದ್ದ ಜನರಿಗೆ ಸರ್ಕಾರ ಪರಿಹಾರ ನೀಡಿತ್ತು. ಆದರೆ ಇನ್ನೂ ಸಹ ನೂರಾರು ಕುಟುಂಬಗಳಿಗೆ ನಾನಾ ಕಾರಣಗಳನ್ನು ನೀಡಿ ಇಂದಿಗೂ ಪರಿಹಾರ ನೀಡಿಲ್ಲ. 25 ವರ್ಷಗಳಿಂದ ಪರಿಹಾರಕ್ಕಾಗಿ ಕೆಲಸ ಕಾರ್ಯ ಬಿಟ್ಟು ಕಚೇರಿಗೆ ಅಲೆದಾಡಿ, ಸುಸ್ತಾಗಿದ್ದೇವೆ. ಇನ್ನಾದರೂ ತಮಗೆ ನ್ಯಾಯ ಕೊಡಿ ಎಂದು ನಿರಾಶ್ರಿತರು ಕೇಳಿಕೊಳ್ಳುತ್ತಿದ್ದಾರೆ.